ಕಾರ್ಯಚರಣೆ ಮುಂದುವರಿಸಿದ ಪೊಲೀಸರು
ಶ್ರೀನಗರ: ಹಬ್ಬಕ್ಕೆಂದು ಮನೆಗೆ ಬಂದು, ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಜಮ್ಮು-ಕಾಶ್ಮೀರದ ಕುಲ್ಗಾಮ್ ಮೂಲದ ಯೋಧನನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಚರಣೆ ಮುಂದುವರಿಸಿದ್ದಾರೆ. ಪ್ರಕರಣ ಸಬಂಧಿಸಿದಂತೆ ಹತ್ತಾರು ಮಂದಿಯನ್ನು ವಿಚಾರಣೆ ನಡೆಸಿ, ನಾಪತ್ತೆಯಾದ ಯೋಧನ ಕಾಲ್ ಡೀಟೆಲ್ಸ್ ಅನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದ್ದಾರೆ.
ಲಡಾಖ್ ಪ್ರದೇಶದಲ್ಲಿ ನಿಯೋಜಿಸಲ್ಪಟ್ಟಿದ್ದ ಯೋಧ ಜಾವೇದ್ ಅಹ್ಮದ್ ವಾನಿ, ಈದ್ ಹಬ್ಬಕ್ಕೆಂದು ರಜೆ ಪಡೆದು ಕುಲ್ಗಾಮ್‌ನಲ್ಲಿರುವ ತಮ್ಮ ನಿವಾಸಕ್ಕೆ ಬಂದಿದ್ದರು. ಭಾನುವಾರ ಮತ್ತೆ ಸೇವೆಗೆ ಹಾಜರಾಗಬೇಕಿತ್ತು. ಆದರೆ ಶನಿವಾರ ಸಂಜೆ ಮಾರುಕಟ್ಟೆಗೆಂದು ಕಾರಲ್ಲಿ ತೆರಳಿದ್ದವರು ಮರಳಿ ಬರಲೇ ಇಲ್ಲ.ಕಾರು ಪತ್ತೆಯಾಗಿದ್ದು, ಯೋಧ ನಾಪತ್ತೆಯಾಗಿದ್ದಾರೆ.
ಉಗ್ರರು ಅವರನ್ನು ಅಪಹರಿಸಿರುವ ಶಂಕೆಯ ಮೇರೆಗೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಏತನ್ಮಧ್ಯೆ ವಾನಿ ಅವರ ತಂದೆ ಕೂಡ ವಿಡಿಯೋ ಮೂಲಕ ಮನವಿ ಮಾಡಿ, ಯಾರೇ ತನ್ನ ಮಗನನ್ನು ಅಪಹರಿಸಿದ್ದರೂ, ಆತನನ್ನು ಜೀವಂತವಾಗಿ ಬಿಡುಗಡೆಗೊಳಿಸಿ, ಅವನಿಂದ ಸಮಸ್ಯೆಯಾಗಿದ್ದರೆ ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ನಮ್ಮ ಕುಟುಂಬಕ್ಕೆ ಅವನೊಬ್ಬನೇ ಆಧಾರವೆಂದು ಕಣ್ಣೀರು ಹಾಕಿದ್ದಾರೆ.