ರಾಮನಗರ : ಪ್ರೀತಿ ಹೆಸರಲ್ಲಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ ಹಿನ್ನಲೆ ಡೆತ್ನೋಟ್ ಬರೆದಿಟ್ಟು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ನಡೆದಿದೆ. ವರ್ಷಿಣಿ (22) ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದು, ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಅಭಿ ಎಂಬಾತನ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.
ಮೈಸೂರಿನ ಖಾಸಗಿ ಕಾಲೇಜಿನಲ್ಲಿ MSC ವ್ಯಾಸಂಗ ಮಾಡುತ್ತಿದ್ದ ವರ್ಷಿಣಿ ಮನೆಯಲ್ಲಿಯೇ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಡೆತ್ನೋಟ್ ಬರೆದಿರುವ ಅವರು ಆರೋಪಿ ಅಭಿವಿರುದ್ಧ ಸಾಲು ಸಾಲು ಆರೋಪ ಮಾಡಿದ್ದು, ಇಂತವರನ್ನು ನಂಬಿ ಯಾರೂ ತಮ್ಮ ಜೀವನ ಹಾಳುಮಾಡಿಕೊಳ್ಳಬೇಡಿ ಎಂದು ಮನವಿಯನ್ನೂ ಮಾಡಿದ್ದಾರೆ. ತಾಯಿ ಮತ್ತು ಶಿಕ್ಷಕರ ಬಳಿ ಕ್ಷಮೆ ಕೇಳುವುದಾಗಿಯೂ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ವರ್ಷಿಣಿ ಡೆತ್ನೋಟ್ನಲ್ಲಿ ಏನಿದೆ?
ನನ್ನ ಸಾವಿಗೆ ಅಭಿ ದೇವರದೊಡ್ಡಿ ಕಾರಣ. ಅಮ್ಮ, ಸಾಧ್ಯವಾದರೆ ನನ್ನ ಕ್ಷಮಿಸು. ಆತ ನನ್ನನ್ನು ನಂಬಿಸಿ, ಬ್ಲ್ಯಾಕ್ಮೇಲ್ ಮಾಡಿ ಉಂಗುರ, ಹಣ ಎಲ್ಲವನ್ನೂ ಪಡೆದಿದ್ದಾನೆ. ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಲೈಂಗಿಕವಾಗಿ ನನಗೆ ಸಹಕರಿಸಿದರೆ ಮಾತ್ರ ಅವನ್ನು ಡಿಲೀಟ್ ಮಾಡೋದಾಗಿ ಆತ ಹೇಳಿದ್ದ. ಹೀಗಾಗಿ ಭಯಕ್ಕೆ ಕೊನೆಗೆ ಅದನ್ನೂ ಮಾಡಿದ್ದೆ. ಪ್ರೀತಿ ಹೆಸರಲ್ಲಿ ಆತ ನನಗೆ ಮೋಸ ಮಾಡಿದ್ದು, ನಾನು ಗರ್ಭಿಣಿ ಆದ ಹಿನ್ನಲೆ ಆತ ಗರ್ಭಪಾತವನ್ನೂ ಮಾಡಿಸಿದ್ದಾನೆ ಎಂದು ವರ್ಷಿಣಿ ಆರೋಪಿಸಿದ್ದಾರೆ.
ಅಮ್ಮ ನನಗೆ ಗೊತ್ತು ನಾನು ನಿನ್ನ ನಂಬಿಕೆಗೆ ಮೋಸ ಮಾಡಿದ್ದೇನೆ. ಸಾಯೋಕೂ ನನಗೆ ಭಯ ಆಗುತ್ತಿದೆ. ಆದರೆ ನನಗೆ ಬೇರೆ ದಾರಿ ಇಲ್ಲ. ನಾನು ಈತನನ್ನು ನಂಬಬಾರದಿತ್ತು. ಆದ್ರೆ ಅದೊಂದು ತಪ್ಪು ಮಾಡಿ ಎಲ್ಲ ಹಾಳುಮಾಡಿಕೊಂಡುಬಿಟ್ಟೆ. ಆತನನ್ನು ಸುಮ್ಮನೆ ಬಿಡಬೇಡಿ. ನನ್ನ ಹಾಗೇ ಇಂತವರನ್ನು ನಂಬಿ ಯಾರೂ ಜೀವನ ಹಾಳುಮಾಡಿಕೊಳ್ಳಬೇಡಿ. ನನ್ನ ಶಿಕ್ಷಕರಲ್ಲೂ ನಾನು ಕ್ಷಮೆ ಕೇಳುತ್ತೇನೆ ಎಂದು ವರ್ಷಿಣಿ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ



