ಬೆಂಗಳೂರು : ಕರ್ನಾಟಕದ ಶಾಲೆಗಳಲ್ಲಿ ಲಾಂಗ್ವೇಜ್ ಲ್ಯಾಬ್ ತೆರೆಯಿರಿ. ಕನ್ನಡದ ಜೊತೆಗೆ ಎಲ್ಲ ಭಾಷೆಗಳನ್ನ ಕಲಿಯುವಂತೆ ಆಗಬೇಕು. ಲಾಂಗ್ವೇಜ್ ಲ್ಯಾಬ್ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಎಂದು ಸ್ಪೀಕರ್ ಖಾದರ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕ ಅಂಗೀಕಾರ ಚರ್ಚೆ ವೇಳೆ ಭಾಷಾ ವಾರ್ ನಡೆಯಿತು. ಬಿಲ್ ಚರ್ಚೆ ವೇಳೆ ಸರ್ಕಾರದ ಕರ್ನಾಟಕ ಪಬ್ಲಿಕ್ ಸ್ಕೂಲ್ಗಳಲ್ಲಿ ಇಂಗ್ಲೀಷ್ ಮಾಧ್ಯಮ ಬೇಕು ಎಂದು ವಿಧಾನಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಒತ್ತಾಯಿಸಿದರು. ನಮ್ಮ ಮಕ್ಕಳು ಇಂಗ್ಲೀಷ್ ಕಲಿಯಬೇಕು. ಅವರು ಅಮೆರಿಕಗೆ ಹೋಗಬೇಕು. ಅಲ್ಲಿಯೂ ಅವರು ತಿರುಗಿ ಬರಬೇಕು. ನಮ್ಮ ಮಕ್ಕಳು ಇಲ್ಲಿಯೇ ಇರಬೇಕಾ? ಅವರು ದೇಶ ಸುತ್ತಿ ಬರಲಿ. ಇಂಗ್ಲಿಷ್ ಬೇಕೇಬೇಕು. ಸರ್ಕಾರಿ ಶಾಲೆ ಮಕ್ಕಳು ಸಹ ಇಂಗ್ಲಿಷ್ ಓದಬೇಕು ಎಂದು ಶಿವಲಿಂಗೇಗೌಡ ಒತ್ತಾಯಿಸಿದರು.
ಆಗ ಶಾಸಕ ಬಸವರಾಜ ರಾಯರೆಡ್ಡಿ ಆಕ್ಷೇಪ ವ್ಯಕ್ತಪಡಿಸಿ, ಇಂಗ್ಲೀಷ್ ಬರೋರು ಮಾತ್ರ ಮೇಧಾವಿ ಅಲ್ಲ, ನಾವೆಲ್ಲಾ ಪಿಯುಸಿ ತನಕ ಕನ್ನಡ ಓದಿದ್ದೇವೆ ಎಂದರು. ಆಗ ಶಿವಲಿಂಗೇಗೌಡ ಕಿಡಿಕಾರಿ ವಾಕ್ಸಮರ ನಡೆಯಿತು. ಹಳ್ಳಿ ಮಕ್ಕಳು ಆರ್ಥಿಕ ಶಕ್ತಿ ಇಲ್ಲದ ಮಕ್ಕಳು, ಇಂಗ್ಲಿಷ್ ಓದಬೇಕು. ಪ್ರಪಂಚ ವೈಜ್ಞಾನಿಕವಾಗಿ ಬೆಳೆದಿದೆ ಅಂತಾ ತಿರುಗೇಟು ನೀಡಿದರು. ಇದೇ ವೇಳೆ ಸ್ಪೀಕರ್ ಮಧ್ಯಪ್ರವೇಶ ಮಾಡಿ ರಾಯರೆಡ್ಡಿ ನಿಮ್ಮ ಮಕ್ಕಳು ಎಲ್ಲಿ ಓದಿದ್ದು? ನೀವು ಇಂಗ್ಲೀಷ್ ಮಾತಾಡಲ್ವಾ ಎಂದು ಟಾಂಗ್ ಕೊಟ್ಟರು.
ಇನ್ನು ಇದೇ ವೇಳೆ ಆಡಳಿತ ಪಕ್ಷದ ಇಬ್ಬರು ಸದಸ್ಯರ ಮಾತಿನ ಚಕಮಕಿಗೆ ಬಿಜೆಪಿ ಸದಸ್ಯರು ವ್ಯಂಗ್ಯವಾಡಿದರು. ಅವರಿಬ್ಬರಿಗೆ ಯಾವುದು ಬೇಕು ಮೊದಲು ಮುಗಿಸಿ ಎಂದು ಕಾಲೆಳೆದರು. ಶಿವಲಿಂಗೇಗೌಡ ಅವರದ್ದು ಬಾಂಬೆ ಇಂಗ್ಲೀಷ್ ಒಂದು ಇದೆ ಎಂದು ವಿಪಕ್ಷ ನಾಯಕ ಅಶೋಕ್ ಜೋಕ್ ಮಾಡಿದ್ರೆ, ಶಿವಲಿಂಗೇಗೌಡರ ಕನ್ನಡವೂ ಇರಲಿ, ರಾಯರೆಡ್ಡಿ ಅವರ ಇಂಗ್ಲಿಷ್ ಸಹ ಇರಲಿ ಎಂದು ಸುನೀಲ್ ಕುಮಾರ್ ಹಾಸ್ಯ ಬೆರೆಸಿದರು. ಆಗ ಅಂತಿಮವಾಗಿ ಸ್ಪೀಕರ್ ಕನ್ನಡ ಭಾಷೆ ನಮ್ಮ ಮಾತೃ ಭಾಷೆ. ಅದರ ಜೊತೆಗೆ ಅಗತ್ಯ ಇರುವ ಭಾಷೆಗಳನ್ನ ಕಲಿಯಲು ಲಾಂಗ್ವೇಜ್ ಲ್ಯಾಬ್ ತೆರೆಯಲು ಚಿಂತಿಸಿ ಎಂದು ಸಲಹೆ ನೀಡಿದರು.



