ನವದೆಹಲಿ: ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಹಾಗೂ 32 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಕಗ್ಗಂಟಾಗಿ ಪರಿಣಮಿಸಿದೆ. ಹಲವು ತಿಂಗಳಿನಿಂದ ಹಲವು ಸುತ್ತಿನಮಾತುಕತೆಗಳು ನಡೆಯುತ್ತಿದ್ದರೂ ಅಂತಿಮ ರೂಪ ಕೊಡಲು ಸಾಧ್ಯವಾಗಿಲ್ಲ.
ಈ ನಿಟ್ಟಿನಲ್ಲಿ ಇದೇ 16ರಂದು ಸುರ್ಜೇವಾಲಾ ಅವರು ಮತ್ತೆ ಬೆಂಗಳೂರಿಗೆ ಆಗಮಿಸಲಿದ್ದು, ಮುಖಂಡರೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸಲಿದ್ದಾರೆ. ವಿಧಾನಪರಿಷತ್ ಗೆ ನಾಲ್ವರ ಹೆಸರನ್ನು ಶಿಫಾರಸು ಮಾಡಿದ್ದು ಆ ಪಟ್ಟಿಯನ್ನೇ ಅಂತಿಮಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಆದರೆ ಈ ಪಟ್ಟಿಯಲ್ಲಿ ನನ್ನ ಬೆಂಬಲಿಗರಿಗೆ ಅವಕಾಶ ಸಿಕ್ಕಿಲ್ಲ. ಹಿರಿಯ ಮುಖಂಡ ಬಿ.ಎಲ್.ಶಂಕರ್ ಅಥವಾ ಖಜಾಂಚಿ ವಿನಯ್ ಕಾರ್ತಿಕ್ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಕಲ್ಪಿಸಬೇಕು ಎಂದು ಡಿ.ಕೆ. ಶಿವಕುಮಾರ್ ಹಠ ಹಿಡಿದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಿನ್ನೆ ದೆಹಲಿಯಲ್ಲಿ ನೇಮಕಾತಿ ಪ್ರಕ್ರಿಯೆಗೆ ಅಂತಿಮ ರೂಪ ನೀಡಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಗುರುವಾರ ಸಂಜೆ ಸುದೀರ್ಘ ಸಭೆ ನಡೆಸಿದರಾದರೂ ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ.
ಈಗಾಗಲೇ ಮೊದಲ ಹಂತದಲ್ಲಿ 35 ನಿಗಮ ಮಂಡಳಿಗಳಿಗೆ ಶಾಸಕರು ಹಾಗೂ 40 ನಿಗಮ ಮಂಡಳಿಗಳಿಗೆ ಪಕ್ಷದ ಮುಖಂಡರನ್ನು ನೇಮಿಸಲಾಗಿದೆ. ಉಳಿದ 32 ನಿಗಮ ಮಂಡಳಿಗಳಿಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ನೇಮಿಸುವ ಸಂಬಂಧ ಚರ್ಚಿಸಲಾಯಿತು. ನಿಗಮ ಮಂಡಳಿಗಳಿಗೆ ನಿರ್ದೇಶಕರು ಹಾಗೂ ಸದಸ್ಯರ ನೇಮಕ ಆಗಬೇಕಿದ್ದು, ಸುಮಾರು 700 ಮಂದಿಗೆ ಅವಕಾಶ ನೀಡಬಹುದಾಗಿದೆ. ಈ ಮಂಡಳಿಗಳಲ್ಲಿ ಅವಕಾಶ ವಂಚಿತವಾದ ಸಮುದಾಯಗಳಿಗೆ ಅವಕಾಶ ನೀಡಲು ಚಿಂತನೆ ನಡೆದಿದೆ.