Saturday, April 4, 2026
Google search engine

Homeಸ್ಥಳೀಯಮಲೆ ಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಚಿರತೆ ದರ್ಶನ : ಭಕ್ತರಲ್ಲಿ ಆತಂಕ

ಮಲೆ ಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಚಿರತೆ ದರ್ಶನ : ಭಕ್ತರಲ್ಲಿ ಆತಂಕ

ಹನೂರು  :  ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರಿಗೆ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ.

ಹನೂರು ಪಟ್ಟಣದ ಕಂದಾಯ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರದೀಪ್ ಅವರು ಕುಟುಂಬ ಸಮೇತರಾಗಿ ಬೆಟ್ಟಕ್ಕೆ ತೆರಳುತ್ತಿದ್ದಾಗ, ಚಿರತೆ ರಸ್ತೆ ಬಲಭಾಗದಿಂದ ಎಡಭಾಗಕ್ಕೆ ನಡೆದು ದಾಟುತ್ತಿರುವುದು ಗಮನಕ್ಕೆ ಬಂದಿದೆ. ವಾಹನ ಸಮೀಪಿಸುತ್ತಿದ್ದಂತೆ ಚಿರತೆ ಮತ್ತೆ ಅರಣ್ಯ ಪ್ರದೇಶದತ್ತ ತೆರಳಿ ಮರದ ನೆರಳಿನಲ್ಲಿ ಕುಳಿತುಕೊಂಡಿರುವುದು ಕಂಡುಬಂದಿದೆ.

ಈ ಘಟನೆಗೆ ಸಂಬಂಧಿಸಿದ ದೃಶ್ಯವನ್ನು ಪ್ರದೀಪ್ ಅವರ ಸ್ನೇಹಿತರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಚಿರತೆಗಳ ಸಂಚಾರ ಹೆಚ್ಚುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಭಕ್ತರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಸೂಚನೆ ನೀಡಿದೆ.

ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಜಾಗ್ರತೆ ವಹಿಸಬೇಕು, ಕಾಡುಪ್ರಾಣಿಗಳನ್ನು ಕಂಡಲ್ಲಿ ವಾಹನ ನಿಲ್ಲಿಸದೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಹಾಗೂ ಪ್ರಾಣಿಗಳನ್ನು ಪ್ರಚೋದಿಸುವ ಕ್ರಮಗಳನ್ನು ತಪ್ಪಿಸಬೇಕು ಎಂದು ಮನವಿ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ, ಅರಣ್ಯ ಪ್ರದೇಶಗಳಲ್ಲಿ ಆಹಾರ ವಸ್ತುಗಳನ್ನು ಎಸೆಯುವುದು ಹಾಗೂ ಕಾಡುಪ್ರಾಣಿಗಳಿಗೆ ಆಹಾರ ನೀಡುವುದು ತಪ್ಪಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular