ಮೈಸೂರು: ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಬಿಳಿಕೆರೆ ಗ್ರಾಮದ ರೈತ ಕಾಳೇಗೌಡರವರ ಕುಟುಂಬ ಆಗಿರುವ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಆನಂದಗೆರೆ ಮಂಜುನಾಥಗೌಡ ಒತ್ತಾಯಿಸಿದ್ದಾರೆ.
ರೈತ ಕಾಳೇಗೌಡ ಬಿನ್ ಚಂದ್ರೆಗೌಡ ಅವರಿಗೆ ಸರ್ವೇ ನಂ.83/1ರಲ್ಲಿ ಸುಮಾರು ಒಂದು ಎಕ್ಕರೆ ಹನ್ನೊಂದು ಗುಂಟೆ ಜಮೀನಿದ್ದು, ಅದರಲ್ಲಿ ಅಲಸಂದೆ, ಜೋಳ ಸೇರಿದಂತೆ ಇತರೆ ಬೆಳೆಗಳನ್ನು ಬೇಸಾಯ ಮಾಡಿದರು,
ಇತ್ತಿಚ್ಚೇಗೆ ಮಕ್ಕಳಾದ ಶ್ರುತಿಮ್ಮ, ಮಧು, ವಸುಮತಿ, ರಶ್ಮಿ ಜತೆ ರೈತ ಕಾಳೇಗೌಡ ಜಮೀನಿನ ಬಳಿ ಬಂದಂತಹ ಸಂದರ್ಭದಲ್ಲಿ ಪಕ್ಕದ ಜಮೀನಿನ ಮಾಲೀಕ ವಾಸುದೇವಪ್ಪ ಎಂಬ ವ್ಯಕ್ತಿ ತನ್ನ ಮಗ ಮತ್ತು ಖಾಸಗಿ ವ್ಯಕ್ತಿಗಳನ್ನು ಕರೆತಂದು ಕಾಳೇಗೌಡ ಜಮೀನಿನಲ್ಲಿ ಬೇಸಾಯ ಮಾಡಿದ ಬೆಳೆಗಳನ್ನು ಟ್ರ್ಯಾಕ್ಟರ್ ಮೂಲಕ ನಾಶ ಮಾಡಿರುವುದು ಗಮನಕ್ಕೆ ಬಂದಿದೆ.
ಈ ವಿಚಾರವಾಗಿ ಬಿಳಿಕೆರೆ ಪೊಲೀಸ್ ಠಾಣೆಗೆ ದೂರನ್ನು ಕೂಡ ನೀಡಲಾಗಿದೆ. ಅಲ್ಲದೇ ರೈತನಿಗೆ ಏಕಾಏಕಿ ಅನ್ಯಾಯವಾಗಿರುವ ಕುರಿತು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳಾದ ಪೆಂಜಳ್ಳಿ ನಾಗರಾಜೇಗೌಡ, ಪಾಂಡವಪುರ ತಾಲೂಕು ಅಧ್ಯಕ್ಷ ಮಹದೇವಗೌಡ, ಪಿರಿಯಾಪಟ್ಟಣ ಅಧ್ಯಕ್ಷ ಕುಮಾರ್, ಬೆಟ್ಟದಪುರ ಹೋಬಳಿ ಅಧ್ಯಕ್ಷ ಸಣ್ಣೆಗೌಡ, ಜಿಲ್ಲಾ ಕಾರ್ಯದರ್ಶಿ ಹುಲ್ಲೇನಹಳ್ಳಿ ದೇವರಾಜು, ಆರತಿ ಉಕ್ಕುಡ ಜಯರಾಮ್ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆಯನ್ನು ಕೂಡ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮೀನಾಮೇಷ ಎಣಿಸದೇ ಆಗಿರುವ ಅನ್ಯಾಯ ಹಾಗೂ ದೌರ್ಜನ್ಯಕ್ಕೆ ನ್ಯಾಯ ಒದಗಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.