Tuesday, May 19, 2026
Google search engine

Homeಸ್ಥಳೀಯಜನಸಾಮಾನ್ಯರಿಗೆ ಸರ್ಕಾರದ ಯೋಜನೆ ತಲುಪಿಸಿ : ಅಧಿಕಾರಿಗಳಿಗೆ ಕೆ.ಬಿ. ಪ್ರಭುಸ್ವಾಮಿ ಕರೆ

ಜನಸಾಮಾನ್ಯರಿಗೆ ಸರ್ಕಾರದ ಯೋಜನೆ ತಲುಪಿಸಿ : ಅಧಿಕಾರಿಗಳಿಗೆ ಕೆ.ಬಿ. ಪ್ರಭುಸ್ವಾಮಿ ಕರೆ

ಕೆ.ಆರ್.ನಗರ : ಸರ್ಕಾರದ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದ್ದು ಈ ವಿಚಾರವನ್ನು ಅರಿತು ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಕೆ.ಬಿ. ಪ್ರಭುಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿಯ ಕೃಷ್ಣರಾಜೇಂದ್ರ ಸಭಾಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಇಲಾಕಖಾವಾರು ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೆ. ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕುಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಳಪೆ ಸಾಧನೆ ಮಾಡಿದ್ದು ಈ ತಪ್ಪನ್ನು ಸರಿಪಡಿಸಿಕೊಂಡು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಬರುವಂತೆ ಕಾರ್ಯ ಯೋಜನೆ ರೂಪಿಸಬೇಕು ಎಂದು ಬಿಇಒ ಆರ್. ಕೃಷ್ಣಪ್ಪ ಅವರಿಗೆ ಸೂಚಿಸಿದರು.
ತೋಟಗಾರಿಕಾ ಇಲಾಖೆಯು ಪ್ರಗತಿಯಲ್ಲಿ ಅತ್ಯಂತ ಹಿಂದುಳಿದಿದ್ದು ಸರ್ಕಾರದಿಂದ ರೈತರಿಗೆ ದೊರೆಯುವ ಸವಲತ್ತುಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕೆಂದು ಆದೇಶಿಸಿದ ಅವರು ಪ್ರಗತಿಪರ ರೈತರನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ಕೊಡಿಸಬೇಕೆಂದರು. ಕೃಷಿ ಇಲಾಖೆಯ ಅಧಿಕಾರಿಗಳು ಜಾಗೃತೆಯಿಂದ ಕೆಲಸ ಮಾಡಬೇಕೆಂದ ಆಡಳಿತಾಧಿಕಾರಿಗಳು ಸಕಾಲದಲ್ಲಿ ರೈತರ ಜಮೀನಿನ ಮಣ್ಣು ಪರೀಕ್ಷೆ ಮಾಡಿಸುವುದರ ಜತೆಗೆ ಕಡ್ಡಾಯವಾಗಿ ಎಲ್ಲ ರೈತರನ್ನು ಎಫ್ ಐ ಡಿ ದಾಖಲೆಗೆ ಒಳಪಡಿಸಬೇಕು ಎಂದು ಸಲಹೆ ನೀಡಿದರು.
ಎಲ್ಲಿಯೂ ಕುಡಿಯುವ ನೀರಿಗೆ ಕೊರತೆ ಬಾರದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಈ ವಿಚಾರದಲ್ಲಿ ಯಾವುದೇ ದೂರುಗಳು ಕೇಳಿ ಬಂದರೂ ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು ಕೆಲಸ ಮಾಡಬೇಕು. ಬದ್ಧತೆಯಿಂದ ಕಾರ್ಯ ನಿರ್ವಹಿಸಿದರೆ ರೈತರ ಸಮಸ್ಯೆಗಳು ತಾನಾಗಿಯೇ ಬಗೆಹರಿಯುತ್ತವೆ ಎಂದರು. ಗ್ರಾಮಾಂತರ ಪ್ರದೇಶದ ಆಯುಷ್ ಆಸ್ಪತ್ರೆಗಳಲ್ಲಿ ಯೋಗ ಕೇಂದ್ರಗಳನ್ನು ತೆರೆಯಲು ವೈದ್ಯರು ಮುಂದಾಗಬೇಕೆಂದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಎಚ್. ಡಿ. ತಾಲೂಕು ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಅವರ ಸಾಧನೆ ಮತ್ತು ಪರಿಶ್ರಮ ನಮ್ಮೆಲ್ಲರಿಗೂ ಮಾದರಿಯಾಗಬೇಕು ಎಂದರು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಹಲವು ಸಲಹೆ ಮತ್ತು ಸೂಚನೆಗಳನ್ನು ನೀಡಿ ಆಡಳಿತಾಧಿಕಾರಿಗಳು ಯಾವುದೇ ಸಮಸ್ಯೆಗಳಿದ್ದರೂ ಕೂಡಲೇ ನನ್ನ ಗಮನಕ್ಕೆ ತರಬೇಕೆಂದು ತಾಕೀತು ಮಾಡಿದರು.
ಕೆ. ಆರ್. ನಗರ ತಾಲೂಕಿನಾದ್ಯಂತ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ದೊರೆಯುವ ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ಸರಬರಾಜು ಮಾಡಬೇಕೆಂದು ನುಡಿದರು.
ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ವಿ.ಪಿ. ಕುಲದೀಪ್, ಬಿಇಓ ಆರ್. ಕೃಷ್ಣಪ್ಪ, ವಲಯ ಅರಣ್ಯಾಧಿಕಾರಿ ಟಿ.ವಿ. ಹರಿಪ್ರಸಾದ್, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ರಾಮು, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಆನಂದ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಮೂರ್ತಿ, ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಆಯಾಜ್ ಪಾಷಾ, ಬಿಸಿಎಂ ಇಲಾಖೆಯ ಮೇಘನಾ, ತಾ.ಪಂ. ವ್ಯವಸ್ಥಾಪಕ ಸತೀಶ್, ಬಿಸಿಯೂಟ ವಿಭಾಗದ ಸಹಾಯಕ ನಿರ್ದೇಶಕ ಸ್ವಾಮೀಗೌಡ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular