ಬೆಂಗಳೂರು: ಮೈಸೂರು ದಸರಾ-2025 ನಾಡಹಬ್ಬದ ವೈಭವಮಯ ಆಚರಣೆಯ ಸಿದ್ಧತೆಗಳು ಜೋರಾಗುತ್ತಿರುವಾಗಲೇ, ಈ ಹಬ್ಬದ ಮೂಲ ಚಾರಿತ್ರಿಕ, ಸಾಂಸ್ಕೃತಿಕ ಮಹತ್ವ ಕಳೆದುಹೋಗಬಾರದು ಎಂಬ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಂದ ಪ್ರಮುಖ ಸೂಚನೆಗಳೊಂದು ಹೊರಬಿದ್ದಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೈಸೂರು ದಸರಾ ನಾಡಹಬ್ಬವಾಗಿ ಗುರುತಿಸಲ್ಪಟ್ಟಿದ್ದು ಅದರ ಹಿಂದಿನ ಇತಿಹಾಸ, ಸಂಸ್ಕೃತಿ, ಜನಪದ ಪರಂಪರೆಯೊಂದಿಗೆ ಔಪಚಾರಿಕತೆಗೂ ಸತ್ಯತೆಯ ಸಂಬಂಧವಿದೆ ಎಂದು ಹೇಳಿದರು.
“ದಸರಾ ವಿಜೃಂಭಣೆಯಿಂದ ಆಚರಿಸೋದು ಬೇಡ ಅನ್ನೋದಿಲ್ಲ. ಆದರೆ ವೈಭವ ಅನ್ನೋದು ದುಡ್ಡು ಎಷ್ಟು ಖರ್ಚು ಮಾಡುತ್ತೇವೆ ಎಂಬದರಲ್ಲಿ ಇರಬಾರದು. ಸಾರ್ವಜನಿಕ ಹಣವನ್ನು ಶಿಸ್ತಿನಿಂದ, ಜವಾಬ್ದಾರಿಯಿಂದ ಬಳಸಬೇಕು” ಎಂದು ಅವರು ಹೇಳಿದರು.
ನಾವು ಪ್ರತೀ ಇಲಾಖೆಯಲ್ಲೂ ಜಾರಿ ಮಾಡಿರುವ ಜನಪರ ಕಾರ್ಯಕ್ರಮಗಳು ಜನರಿಗೆ ಸಮರ್ಪಕವಾಗಿ ಮನವರಿಕೆ ಆಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು. ಈ ಬಾರಿ ರಾಜ್ಯದಾದ್ಯಂತ ಮಳೆ ಬೆಳೆ ಉತ್ತಮವಾಗಿದ್ದು, ನದಿ, ಕೆರೆಗಳು ತುಂಬಿದ್ದು, ವೈಭವದಿಂದ ದಸರಾ ಆಚರಿಸಲಾಗುವುದು ಎಂದರು.
ಸೆಪ್ಟಂಬರ್ 22ರಂದು ದಸರಾ ಹಬ್ಬಕ್ಕೆ ಚಾಲನೆ ದೊರೆಯಲಿದ್ದು, ಅಕ್ಟೋಬರ್ 2ರಂದು ವಿಜಯದಶಮಿ, ಜಂಬೂ ಸವಾರಿ ನಡೆಯಲಿದೆ. ದಸರಾ ಈ ಬಾರಿ 10ದಿನಗಳ ಬದಲು 11ದಿನಗಳ ಕಾಲ ನಡೆಯಲಿದೆ. ದಸರಾಕ್ಕೆ ತನ್ನದೇ ಆದ ಚಾರಿತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದ್ದು, ಇದಕ್ಕೆ ಪೂರಕವಾಗಿ ದಸರಾ ಆಚರಿಸಲಾಗುವುದು. ವಿಶ್ವ ವಿಖ್ಯಾತ ದಸರಾದ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.
ಕಳೆದ ವರ್ಷ ದಸರಾ ಆಚರಣೆಗೆ ಒಟ್ಟು ರೂ. 40 ಕೋಟಿ ಅನುದಾನ ಒದಗಿಸಲಾಗಿತ್ತು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆಗೆ ಬೇಕಾದಷ್ಟು ಅನುದಾನವನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಅಕ್ಟೋಬರ್ 2ರಂದು ವಿಜಯದಶಮಿ ಬಂದಿರುವ ಕಾರಣ ಸ್ತಬ್ಧ ಚಿತ್ರಗಳಲ್ಲಿ ಗಾಂಧೀಜಿ ವಿಚಾರಧಾರೆಗಳಿಗೆ ಸಹ ಅವಕಾಶ ಕಲ್ಪಿಸಬೇಕು. ಕಲ್ಯಾಣ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳ ಮಾಹಿತಿ ಒದಗಿಸಲು ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ದಸರಾ ಸಂದರ್ಭದಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. 10ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ಸಂದರ್ಭ ಇದಾಗಿದೆ. ವಿದೇಶಿಗರೂ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಾರೆ. ಯಾವುದೇ ಕಾರಣಕ್ಕೂ ಅನಾಹುತ ಸಂಭವಿಸದಂತೆ ಎಲ್ಲಾ ಕಡೆ ಮುನ್ನೆಚ್ಚರಿಕೆ ವಹಿಸಬೇಕು. ಅರಮನೆ ಮುಂಭಾಗದಲ್ಲಿ ಆಸನದ ವ್ಯವಸ್ಥೆಯನ್ನು ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಮಾಡಿ ಜನದಟ್ಟಣೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಕಳೆದ ಬಾರಿ ವಿದ್ಯುತ್ ದೀಪ ಅಲಂಕಾರವನ್ನು ವೈಭವದಿಂದ ಮಾಡಲಾಗಿತ್ತು. ಇದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಬಾರಿಯೂ ವಿದ್ಯುತ್ ದೀಪಾಲಂಕಾರವನ್ನು ಇನ್ನಷ್ಟು ಉತ್ತಮವಾಗಿ ಮಾಡಬೇಕು ಎಂದು ಸೂಚನೆ ನೀಡಿದರು.
ದಸರಾ ವೀಕ್ಷಿಸಲು ಆಗಮಿಸುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಶೌಚಾಲಯ, ವಾಹನ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು.ಈ ಬಾರಿಯೂ ದೊಡ್ಡ ಪ್ರಮಾಣದಲ್ಲಿ ಡ್ರೋಣ್ ಶೋ ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಳೆದ ಬಾರಿ ಅರಮನೆ ಮುಂದೆ ಆಸನ ವ್ಯವಸ್ಥೆಯನ್ನು 54 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಇದರಿಂದಾಗಿ ಜಂಬೂ ಸವಾರಿ ಸಂದರ್ಭದಲ್ಲಿ ಜನದಟ್ಟಣೆ ಉಂಟಾಗಿತ್ತು. ಈ ಬಾರಿ ಜನದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ. ಯಾವುದೇ ಕಾರ್ಯಕ್ರಮಗಳ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಜನದಟ್ಟಣೆಯಾಗದಂತೆ ಎಚ್ಚರಿಕೆ ವಹಿಸಬೇಕು. ಪ್ರಜಾಪ್ರಭುತ್ವ, ಸಂವಿಧಾನ, ಅಭಿವೃದ್ಧಿ, ಉತ್ತಮ ಆಡಳಿತದ ಆಶಯದಲ್ಲಿ ದಸರಾ ಆಚರಿಸಲಾಗುವುದು ಎಂದು ತಿಳಿಸಿದರು.
ಈ ಬಾರಿ ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂಬುವುದನ್ನು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ಶಿವರಾಜ ತಂಗಡಗಿ, ಕೆ. ವೆಂಕಟೇಶ್, ಸುರೇಶ್ ಭೈರತಿ, ಜಿ.ಟಿ.ದೇವೇಗೌಡ, ರಮೇಶ್ ಬಂಡಿಸಿದ್ದೇಗೌಡ, ಪುಟ್ಟರಂಗಶೆಟ್ಟಿ, ತನ್ವೀರ್ ಸೇಠ್, ಡಾ.ಯತೀಂದ್ರ ಎಸ್, ಡಾ.ಡಿ.ತಿಮ್ಮಯ್ಯ, ಅನಿಲ್ ಕುಮಾರ್, ಎ.ಆರ್.ಕೃಷ್ಣಮೂರ್ತಿ, ಮಧು ಜಿ ಮಾದೇಗೌಡ, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ಡಾ.ಮಾನಸ, ಪುಷ್ಪಾ ಅಮರನಾಥ್, ಅಯೂಬ್ ಖಾನ್, ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಮತ್ತಿತರರು ಉಪಸ್ಥಿತರಿದ್ದರು.