ಬೆಂಗಳೂರು: ಅತ್ಯಾಚಾರದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಹಾಗೂ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಪ್ರಜ್ವಲ್ ಪರ ವಕೀಲರನ್ನ ತರಾಟೆಗೆ ತೆಗೆದುಕೊಂಡಿದೆ.
ಬೇರೆ ಕೋರ್ಟ್ಗೆ ವರ್ಗಾವಣೆ ಮಾಡುವಂತೆ ಅರ್ಜಿ
ಪ್ರಜ್ವಲ್ ರೇವಣ್ಣ ಅವರ ಪ್ರಕರಣವು ಜನಪತ್ರಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿತ್ತು. ಆದರೆ ಇದನ್ನಬೇರೆ ಕೋರ್ಟ್ಗೆ ವರ್ಗಾವಣೆ ಮಾಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಹೈಕೋರ್ಟ್ ವಿಚಾರಣೆ ಮಾಡಿದ್ದು, ಪ್ರಜ್ವಲ್ ಪರ ವಕೀಲರ ವಿರುದ್ಧ ಗರಂ ಆಗಿದೆ ಎನ್ನಲಾಗಿದೆ. ಅಲ್ಲದೇ, ಇದಕ್ಕೆ ಸಂಬಂಧಪಟ್ಟಂತೆ ಈ ಮೊದಲು ಪ್ರಜ್ವಲ್ ಸಿಸಿಹೆಚ್-1 ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಆದರೆ ಸಿಸಿಹೆಚ್1 ಕೋರ್ಟ್ ಅರ್ಜಿಯನ್ನ ವಜಾ ಮಾಡಿತ್ತು. ಹಾಗಾಗಿ ಪ್ರಜ್ವಲ್ ಪರ ವಕೀಲರು ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ನ್ಯಾಯಮೂರ್ತಿ ಎಮ್.ಐ ಅರುಣ್ ಪೀಠದಲ್ಲಿ ಅರ್ಜಿ ವಿಚಾರಣೆ ಮಾಡಲಾಗಿದೆ.
ಇನ್ನು ಈ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ವಾದ ಮಂಡನೆ ಮಾಡಿದ್ದು, ಪ್ರಜ್ವಲ್ ಪರ ವಕೀಲರು ಜನಪ್ರತಿನಿಧಿಗಳ ಕೋರ್ಟ್‌ನ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಪೂರ್ವಾಗ್ರಹಪೀಡಿತರಾಗುವ ಸಾಧ್ಯತೆ ಇದೆ ಎಂದು ವಾದ ಮಾಡಿದ್ದಾರೆ. ಇದಕ್ಕೆ ಹೈಕೋರ್ಟ್ , ಹೈಕೋರ್ಟ್ ಈ ರೀತಿ ಪ್ರಕರಣವನ್ನು ವರ್ಗಾವಣೆ ಮಾಡಲು ಇಷ್ಟಪಡುವುದಿಲ್ಲ. ಈ ರೀತಿ ವರ್ಗಾವಣೆ ಮಾಡುವುದರಿಂದ. ಅದು ನ್ಯಾಯಾಧೀಶರ ಮೇಲೆ ಬೇರೆ ರೀತಿಯ ಭಾವನೆ ಬರಲು ಕಾರಣವಾಗುತ್ತದೆ. ಹಾಗಾಗಿ ಈ ರೀತಿ ಮಾಡಲು ಆಗುವುದಿಲ್ಲ ಎಂದು ಪ್ರಜ್ವಲ್ ಪರ ವಕೀಲರಿಗೆ ಹೈಕೋರ್ಟ್ ತಾಕೀತು ಮಾಡಿದೆ ಎನ್ನಲಾಗಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿನ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಸೇರಿದ ಗನ್ನಿಗಡ ತೋಟದ ಮನೆಯಲ್ಲಿ ಮನೆಗೆಲಸದ ಮಹಿಳೆಯ ಮೇಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಯ ಜೊತೆಗೆ 5 ಲಕ್ಷ ರೂ ದಂಡ ವಿಧಿಸಲಾಗಿದ್ದು, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ.