ಬೆಳಗಾವಿ : ಚಿನ್ನ ಕಳ್ಳಸಾಗಣೆಯಂತೆ ಗಲ್ಫ್ ಕಂಟ್ರಿಗಳಿಂದ ಡೀಸೆಲ್ ಸ್ಮಗ್ಲಿಂಗ್ ಮಾಡುತ್ತಿದ್ದವರನ್ನ ಪೊಲೀಸರು ಬಂಧಿಸಿದ್ದು, ತೈಲ ಉತ್ಪನ್ನಗಳ ಕಳ್ಳಸಾಗಣೆ ಮಾಡುತ್ತಿದ್ದ ಖದೀಮರು ಖಾಕಿ ಕೈಗೆ ಸಿಕ್ಕಿಬಿದ್ದಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತೈಲದಿಂದ ಕೋಟಿ ಕೋಟಿ ತೆರಿಗೆ ವಂಚಿಸಿದ್ದಾರೆ ಎನ್ನಲಾಗಿದೆ. ಇನ್ನೂ ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಟ್ಯಾಂಕರ್‌ನಲ್ಲಿ ತೈಲ ಸಾಗಾಟ ಮಾಡಲಾಗಿತ್ತು. ಈ ವೇಳೆ ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಡೀಸೆಲ್ ಕಳ್ಳ ಸಾಗಣೆ ಮಾಡುತ್ತಿದ್ದವರನ್ನ ಬಂಧಿಸಿದ್ದಾರೆ.
ಮುಂಬೈನಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ತೈಲ ಕಳ್ಳಸಾಗಾಣೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಬಿ.ಆರ್.ಗಡ್ಡೇಕರ್ ನೇತೃತ್ವದ ತಂಡದ ಟ್ಯಾಂಕರ್ ಮೇಲೆ ದಾಳಿ ನಡೆಸಿದೆ. ದಾಳಿಯ ವೇಳೆ ದಾಖಲೆಯಿಲ್ಲದೇ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುವುದು ಬೆಳಕಿಗೆ ಬಂದಿದೆ.
ಈ ವೇಳೆ 17 ಲಕ್ಷ ಮೌಲ್ಯದ 17 ಸಾವಿರ ಲೀಟರ್ ಡೀಸೆಲ್ ಹಾಗೂ ಟ್ಯಾಂಕರ್ನನ್ನು ಜಪ್ತಿ ಮಾಡಲಾಗಿದ್ದು, ತುಮಕೂರು ಮೂಲದ ಟ್ಯಾಂಕರ್ ಮಾಲೀಕ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಗಲ್ಫ್ ಕಂಟ್ರಿಗಳಿಂದ ಅಕ್ರಮವಾಗಿ ತೈಲ ಉತ್ಪನ್ನಗಳನ್ನು ತರುತ್ತಿರುವ ಸಂಗತಿ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ. ಸ್ಮಗ್ಲಿಂಗ್ ಜಾಲದಲ್ಲಿ ಮಹಾರಾಷ್ಟ್ರ, ರಾಜಸ್ಥಾನದ ಕೈವಾಡವಿದೆ ಎನ್ನುವ ಶಂಕೆ ಇದ್ದು, ತೈಲ ಉತ್ಪನ್ನಗಳ ಸ್ಲಗ್ಲರ್ಸ್ ಬೆನ್ನು ಬಿದ್ದ ಬೆಳಗಾವಿ ನಗರ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.



