Tuesday, May 20, 2025
Google search engine

Homeಸ್ಥಳೀಯಮೈಸೂರು ಸುತ್ತಮುತ್ತಲಿನ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು: ಸಿಎಂ ಸಿದ್ದರಾಮಯ್ಯ

ಮೈಸೂರು ಸುತ್ತಮುತ್ತಲಿನ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು: ಸಿಎಂ ಸಿದ್ದರಾಮಯ್ಯ

ಮೈಸೂರು: ಮೈಸೂರು ಹಾಗೂ ಸುತ್ತಮುತ್ತ ಸ್ಥಾಪಿಸಿರುವ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ನಡೆದ ವಿವಿಧ ಕಾರ್ಖಾನೆಗಳ ಮುಖ್ಯಸ್ಥರ ಸಭೆಯಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು.

ಕಾರ್ಖಾನೆಗಳಲ್ಲಿ ಉದ್ಯೋಗ ಸ್ಥಳೀಯರಿಗೆ ಆದ್ಯತೆ ಸಿಗಬೇಕು. ತಾಂತ್ರಿಕ ನೈಪುಣ್ಯ ಇರುವವರು ಇಲ್ಲಿ ಸಿಗದಿದ್ದಾಗ ಮಾತ್ರ ಹೊರಗಿನವರಿಗೆ ಅವಕಾಶ ಕೊಡಬೇಕು. ಮಾನವ ಸಂಪನ್ಮೂಲ ನಮ್ಮಲ್ಲಿ ಇದೆ. ವೃತ್ತಿ ನೈಪುಣ್ಯ ಇರುವವರೂ ನಮ್ಮಲ್ಲಿ ಇದ್ದಾರೆ. ಸುಳ್ಳು ಕಾರಣ ಕೊಟ್ಟು ಸ್ಥಳೀಯರಿಗೆ ಉದ್ಯೋಗ ಅವಕಾಶ ನಿರಾಕರಿಸಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ಕಾರ್ಖಾನೆಗಳು ಶಾಂತಿಯುತವಾಗಿ ನಡೆಯಬೇಕು. ನಮ್ಮ ಸರ್ಕಾರ ನಿರುದ್ಯೋಗಿ ಪದವೀಧರರಿಗಾಗಿ ಯುವ ನಿಧಿ ಯೋಜನೆ ಜಾರಿಗೆ ತರುತ್ತಿದೆ. ಯೋಜನೆ ಜನವರಿ 12ರಂದು ಉದ್ಘಾಟನೆಯಾಗಲಿದೆ. ನಿಮಗೆ ಯಾವ ರೀತಿಯ ವೃತ್ತಿ ನೈಪುಣ್ಯತೆ ಇರುವವರು ಬೇಕು ಎಂಬುದನ್ನು ಮನಗಂಡು ಪದವೀಧರರಿಗೆ ಸರ್ಕಾರದ ವತಿಯಿಂದ ತರಬೇತಿ ನೀಡಲಾಗುವುದು. ಕಾರ್ಖಾನೆಗಳಿಂದ ರಾಜ್ಯದ ಅಭಿವೃದ್ಧಿ ಆಗುತ್ತದೆ. ಜಿಡಿಪಿ ಬೆಳವಣಿಗೆಗೂ ಇದು ಸಹಕಾರಿ. ಕಾರ್ಖಾನೆಗಳಿಗೆ ಜಮೀನು ನೀಡಿದ ಮಾಲೀಕರ ಕುಟುಂಬದವರಿಗೆ ಪ್ರಮುಖವಾಗಿ ಉದ್ಯೋಗ ನೀಡಬೇಕು. ಸ್ಥಳೀಯರಿಗೆ ಆದ್ಯತೆ ಸಿಗಲೇಬೇಕು. ಒಂದು ವೇಳೆ ವೃತ್ತಿ ನೈಪುಣ್ಯತೆ ಇಲ್ಲದಿದ್ದರೆ ತರಬೇತಿ ನೀಡಿ ನೇಮಕ‌ ಮಾಡಿಕೊಳ್ಳುವುದು ಸೂಕ್ತ ಎಂದು ಸಿಎಂ ಹೇಳಿದರು.

ಸ್ಥಳೀಯರಿಗೆ ಉದ್ಯೋಗ ಸಿಗಬೇಕು ಎಂಬ ದೃಷ್ಟಿಯಿಂದ ಕಾರ್ಖಾನೆಗಳ ಪ್ರಾರಂಭಕ್ಕೆ ಅನುಮತಿ ನೀಡಲಾಗುತ್ತದೆ. ಉದ್ಯೋಗ ಸಿಗದಿದ್ದರೆ ಸರ್ಕಾರದ ಉದ್ದೇಶ ಈಡೇರುವುದಿಲ್ಲ. ನಮ್ಮ ಸರ್ಕಾರ ಕೈಗಾರಿಗಳಿಗೆ ಸೌಲಭ್ಯ ಒದಗಿಸಲು ಬದ್ಧವಾಗಿದೆ. ಅದೇ ರೀತಿ ಸೂಕ್ತ ರಿಯಾಯಿತಿ ನೀಡಲೂ ಸಿದ್ಧ. ನಮ್ಮ ಸರ್ಕಾರ ಕೈಗಾರಿಕೆಗಳ ವಿರುದ್ಧ ಇಲ್ಲ. ಸ್ಥಳೀಯರಿಗೆ ಉದ್ಯೋಗ ಸಿಗಬೇಕು ಎಂಬುದು ನಮ್ಮ ಆಶಯ ಎಂದು ಮುಖ್ಯಮಂತ್ರಿಗಳು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಡಳಿತದ ಅಧಿಕಾರಿಗಳು ಸಭೆಯಲ್ಲಿದ್ದರು.

RELATED ARTICLES
- Advertisment -
Google search engine

Most Popular