ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ೨೧ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ೧೦೨ ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯಗೊಂಡಿದ್ದು. ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದ್ದು ವಿವಿಧ ರಾಜ್ಯಗಳ ೧೦೨ ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. ೬೩.೭ರಷ್ಟು ಹಾಗೂ ತಮಿಳುನಾಡಿನಲ್ಲಿ ೭೨ರಷ್ಟು ಮತದಾನವಾಗಿದೆ.
ಮೊದಲ ಹಂತದಲ್ಲಿ ತಮಿಳುನಾಡಿನ ಎಲ್ಲಾ ೩೯ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆದಿದ್ದು ದಾಖಲೆಯ ಶೇ.೭೨ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಶೇ. ೭೭.೫೭ ರಷ್ಟು ವೋಟಿಂಗ್ ಆಗಿದೆ. ರಾಜಸ್ಥಾನದಲ್ಲಿ ಶೇ.೫೦.೩, ಉತ್ತರ ಪ್ರದೇಶದಲ್ಲಿ ಶೇ.೫೯.೫ ಮತ್ತು ಮಧ್ಯಪ್ರದೇಶದಲ್ಲಿ ಶೇ.೬೬.೭ರಷ್ಟು ಮತದಾನವಾಗಿದೆ.
ರಾಜಸ್ಥಾನ (೧೨), ಉತ್ತರ ಪ್ರದೇಶ (೮), ಮಧ್ಯಪ್ರದೇಶ (೬), ಉತ್ತರಾಖಂಡ (೫), ಅರುಣಾಚಲ ಪ್ರದೇಶ (೨), ಮೇಘಾಲಯ (೨), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (೧), ಮಿಜೋರಾಂ (೧) ), ನಾಗಾಲ್ಯಾಂಡ್ (೧), ಪುದುಚೇರಿ (೧), ಸಿಕ್ಕಿಂ (೧) ಮತ್ತು ಲಕ್ಷದ್ವೀಪ (೧). ಅಲ್ಲದೆ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ ೫, ಬಿಹಾರದಲ್ಲಿ ೪, ಪಶ್ಚಿಮ ಬಂಗಾಳದಲ್ಲಿ ೩, ಮಣಿಪುರದಲ್ಲಿ ಎರಡು ಮತ್ತು ತ್ರಿಪುರಾ, ಜಮ್ಮು ಮತ್ತು ಕಾಶ್ಮೀರ ಮತ್ತು ಛತ್ತೀಸ್‌ಗಢದಲ್ಲಿ ತಲಾ ೧ ಸ್ಥಾನಗಳಲ್ಲಿ ಚುನಾವಣೆ ನಡೆದಿದೆ.
ಲೋಕಸಭಾ ಚುನಾವಣೆಯ ಜೊತೆಗೆ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಕ್ರಮವಾಗಿ ೭೫.೩ರಷ್ಟು ಮತ್ತು ೭೦.೧ರಷ್ಟು ಮತದಾನವಾಗಿದೆ. ಮೊದಲ ಹಂತದಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಕಿರಣ್ ರಿಜಿಜು ಮತ್ತು ಅರ್ಜುನ್ ರಾಮ್ ಮೇಘವಾಲ್ ಅವರು ಸೇರಿದಂತೆ ೧೦೨ ಕ್ಷೇತ್ರಗಳ ಒಟ್ಟು ೧,೬೨೫ ಅಭ್ಯರ್ಥಿಗಳ ಭವಿಷ್ಯ ಇವಿಎಂ ಸೇರಿದೆ.
ನೆಲಬಾಂಬ್ ಸ್ಟೋಟ: ಛತ್ತೀಸಗಢದ ಬಿಜಾಪುರ ಜಿಲ್ಲೆಯ ಬೈರಮಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲರು ಇಟ್ಟಿದ್ದ ಕಚ್ಚಾಬಾಂಬ್ ಸ್ಫೋಟಗೊಂಡ ಪರಿಣಾಮ ಸಿಆರ್‌ಪಿಎಫ್ ಯೋಧರೊಬ್ಬರು ಗಾಯಗೊಂಡಿದ್ದಾರೆ; ಜಿಲ್ಲೆಯ ಗುಲ್ಗಾಂ ಗ್ರಾಮದ ಸಮೀಪ ಗ್ರೆನೇಡ್ ಲಾಂಚರ್‌ಗೆ ಸಿಡಿಮದ್ದು ತುಂಬುವ ಕೋಶವೊಂದು ಆಕಸ್ಮಿಕವಾಗಿ ಸ್ಫೋಟಿಸಿದ ಪರಿಣಾಮ ಸಿಆರ್‌ಪಿಎಫ್ ಯೋಧರೊಬ್ಬರು ಗಾಯಗೊಂಡಿದ್ದಾರೆ.
ಮಣಿಪುರದ ಕೆಲವೆಡೆ ಗುಂಡಿನ ದಾಳಿ : ನ್ನರ್ ಮಣಿಪುರ ಲೋಕಸಭಾ ಕ್ಷೇತ್ರದ ಎರಡು ಸ್ಥಳಗಳಲ್ಲಿ ಗುಂಡಿನ ದಾಳಿ ನಡೆದಿವೆ. ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಮ್ನಾಪೊಕ್ವಿಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಮತಗಟ್ಟೆ ಬಳಿ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ ಮತದಾರರನ್ನು ಓಡಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲಾಗಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಉರಿಪೋಕ್ ಮತ್ತು ಇರೊಯಿಶೆಂಬಾದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ರಾಜಕೀಯ ಪಕ್ಷವೊಂದರ ಚುನಾವಣಾ ಏಜೆಂಟರನ್ನು ಬೆದರಿಸಿ ಮತಗಟ್ಟೆಗಳಿಂದ ಹೊರ ಹೋಗುವಂತೆ ತಾಕೀತು ಮಾಡಿದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಚುನಾವಣಾ ಸಾಮಾಗ್ರಿ ನಾಶ
ರೊಯಿಶೆಂಬಾದಲ್ಲಿ ಮತಗಟ್ಟೆಗಳಲ್ಲಿನ ಚುನಾವಣಾ ಸಾಮಗ್ರಿಗಳು ಮತ್ತು ಸಲಕರಣೆಗಳನ್ನು ನಾಶಪಡಿಸಿರುವ ಘಟನೆ ನಡೆದಿದೆ. ಇಂಫಾಲ್ ಪೂರ್ವ ಜಿಲ್ಲೆಯ ಖೋಂಗ್‌ಮನ್ ವಲಯ ೪ರಲ್ಲಿ ಮತದಾರರು ಮತ್ತು ಅಪರಿಚಿತ ವ್ಯಕ್ತಿಗಳ ನಡುವೆ ವಾಗ್ವಾದ ನಡೆದಿದೆ. ಇವಿಎಂಗಳಿಗೆ ಹಾನಿ ಮಾಡಲಾಗಿದೆ. ಕೀರಾವೊ ವ್ಯಾಪ್ತಿಯ ಕಿಯಾಮ್‌ಗೆಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ರಬ್ಬರ್ ಗುಂಡುಗಳನ್ನು ಹಾರಿಸಿ ಮತಗಟ್ಟೆಗಳಲ್ಲಿದ್ದ ಕಾಂಗ್ರೆಸ್ ಏಜೆಂಟರನ್ನು ಬೆದರಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.