Thursday, May 22, 2025
Google search engine

HomeUncategorizedರಾಷ್ಟ್ರೀಯಲೋಕಸಭಾ ಚುನಾವಣೆ: 57 ಕ್ಷೇತ್ರಗಳಲ್ಲಿ 7ನೇ ಅಂತಿಮ ಹಂತದ ಮತದಾನ

ಲೋಕಸಭಾ ಚುನಾವಣೆ: 57 ಕ್ಷೇತ್ರಗಳಲ್ಲಿ 7ನೇ ಅಂತಿಮ ಹಂತದ ಮತದಾನ

ನವದೆಹಲಿ: ಬಿಹಾರ, ಚಂಡೀಗಢ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 7 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಭೆ ಕ್ಷೇತ್ರಗಳಲ್ಲಿ 2024ರ ಲೋಕಸಭೆ ಚುನಾವಣೆಯ ಏಳನೇ ಹಾಗೂ ಅಂತಿಮ ಹಂತದ ಮತದಾನ ಇಂದು (ಶನಿವಾರ) ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಿಮಾಚಲ ಪ್ರದೇಶದ ಬಿಲಾಸ್‌ಪುರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್‌ಪುರದ ಗೋರಖ್‌ನಾಥ್‌ನಲ್ಲಿರುವ ಮತಗಟ್ಟೆಯಲ್ಲಿ ವೋಟ್​ ಹಾಕಿದರು. ಗೋರಖ್‌ಪುರ ಕ್ಷೇತ್ರದಲ್ಲಿ ಬಿಜೆಪಿಯ ರವಿ ಕಿಶನ್, ಎಸ್‌ಪಿಯ ಕಾಜಲ್ ನಿಶಾದ್ ಮತ್ತು ಬಿಎಸ್‌ಪಿಯ ಜಾವೇದ್ ಅಶ್ರಫ್ ನಡುವೆ ಪೈಪೋಟಿ ಇದೆ.

ಮಾಜಿ ರಾಜತಾಂತ್ರಿಕ ಅಧಿಕಾರಿ ಮತ್ತು ಅಮೃತಸರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತರಂಜಿತ್ ಸಿಂಗ್ ಪಂಜಾಬ್​ನ ಸಂಧು ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ತರಂಜಿತ್ ಸಿಂಗ್​, ಕಾಂಗ್ರೆಸ್ ಸಂಸದ ಮತ್ತು ಅಭ್ಯರ್ಥಿ ಗುರ್ಜಿತ್ ಸಿಂಗ್ ಔಜ್ಲಾ, ಎಎಪಿಯ ಕುಲದೀಪ್ ಸಿಂಗ್ ಧಲಿವಾಲ್ ಮತ್ತು ಎಸ್‌ಎಡಿಯ ಅನಿಲ್ ಜೋಶಿ ಅವರಿಂದ ಸ್ಪರ್ಧೆ ಏರ್ಪಟ್ಟಿದ್ದಾರೆ.

ದೇಶಾದ್ಯಂತ 543 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್​ 19ರಿಂದ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿತ್ತು. ಈಗಾಗಲೇ 6 ಹಂತಗಳಲ್ಲಿ 28 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 486 ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ಪೂರ್ಣಗೊಂಡಿದೆ. ಅಂತಿಮ ಹಂತದಲ್ಲಿ 57 ಕ್ಷೇತ್ರಗಳಿಗೆ ಬೆಳಗ್ಗೆ 7ರಿಂದ ಮತದಾನ ನಡೆಯುತ್ತಿದ್ದು, ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ. ಇದರಲ್ಲಿ 41 ಸಾಮಾನ್ಯ, 13 ಎಸ್ಸಿ ಮೀಸಲು ಹಾಗೂ 3 ಎಸ್ಟಿ ಮೀಸಲು ಕ್ಷೇತ್ರಗಳಿವೆ. ಇದೇ ಸಮಯದಲ್ಲಿ ಒಡಿಶಾ ರಾಜ್ಯ ವಿಧಾನಸಭೆಯ ಉಳಿದ 42 ವಿಧಾನಸಭಾ ಕ್ಷೇತ್ರಗಳಿಗೂ ಏಕಕಾಲದಲ್ಲಿ ಇಂದು ಮತದಾನ ಆರಂಭವಾಗಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.

ಅಖಾಡದಲ್ಲಿರುವ ಪ್ರಮುಖರು: ಪಂಜಾಬ್‌ ನ 13 ಕ್ಷೇತ್ರಗಳು, ಉತ್ತರ ಪ್ರದೇಶದ 13 ಕ್ಷೇತ್ರಗಳು, ಪಶ್ಚಿಮ ಬಂಗಾಳದ 9 ಕ್ಷೇತ್ರಗಳು, ಹಿಮಾಚಲ ಪ್ರದೇಶದ 4 ಕ್ಷೇತ್ರಗಳು, ಬಿಹಾರದ 8 ಕ್ಷೇತ್ರಗಳು, ಒಡಿಶಾದ 6 ಕ್ಷೇತ್ರಗಳು ಮತ್ತು ಜಾರ್ಖಂಡ್‌ನ 3 ಕ್ಷೇತ್ರಗಳು ಹಾಗೂ ಚಂಡೀಗಢ ಲೋಕಸಭೆ ಕ್ಷೇತ್ರದಲ್ಲಿ ವೋಟಿಂಗ್​ ಪ್ರಾರಂಭವಾಗಿದೆ. ಒಟ್ಟಾರೆ 57 ಕ್ಷೇತ್ರಗಳಲ್ಲಿ 904 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಸತತ ಮೂರನೇ ಅವಧಿಗೆ ಅಖಾಡಕ್ಕೆ ಇಳಿದಿದ್ದಾರೆ. ಮೋದಿ ವಿರುದ್ಧ ಅಜಯ್ ರಾಯ್ (ಕಾಂಗ್ರೆಸ್), ಅಥರ್ ಜಮಾಲ್ ಲಾರಿ (ಬಿಎಸ್‌ಪಿ), ಗಗನ್ ಪ್ರಕಾಶ್ ಯಾದವ್, (ಅಪ್ನಾ ದಳ – ಕ್ಯಾಮೆರಾವಾಡಿ), ಕೋಲಿಸೆಟ್ಟಿ ಶಿವಕುಮಾರ್ (ಯುಗ ತುಳಸಿ ಪಕ್ಷ) ಮತ್ತು ಪಕ್ಷೇತರರಾಗಿ ದಿನೇಶ್ ಕುಮಾರ್ ಯಾದವ್ ಹಾಗು ಸಂಜಯ್ ಕುಮಾರ್ ತಿವಾರಿ ಚುನಾವಣಾ ಕಣದಲ್ಲಿದ್ದಾರೆ.

ಇನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ಪಂಜಾಬ್‌ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿ, ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರತಿ ಹಾಗು ನಟಿ ಕಂಗನಾ ರಣಾವತ್​, ಪಂಜಾಬ್‌ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿ, ಮೂರು ಬಾರಿ ಸಂಸದರಾಗಿರುವ ಹರ್‌ಸಿಮ್ರತ್ ಕೌರ್ ಬಾದಲ್ ಸೇರಿದಂತೆ ಇತರ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

10.06 ಕೋಟಿ ಮತದಾರರು: ಅಂತಿಮ ಹಂತದ 57 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಅಂದಾಜು 10.06 ಕೋಟಿ ಮತದಾರರು ವೋಟ್​ ಹಾಕಲಿದ್ದಾರೆ. ಈ ಪೈಕಿ 5.24 ಕೋಟಿ ಪುರುಷರು, 4.82 ಕೋಟಿ ಮಹಿಳೆಯರು ಮತ್ತು 3,574 ತೃತೀಯಲಿಂಗಿ ಮತದಾರರು ಇದ್ದಾರೆ. ಒಟ್ಟಾರೆ 1.09 ಲಕ್ಷ ಮತಗಟ್ಟೆಗಳನ್ನು ತೆರೆಯಲಾಗಿದೆ. 10.9 ಲಕ್ಷ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ನ್ಯಾಯಸಮ್ಮತ, ಶಾಂತಿಯುತ ಚುನಾವಣೆ ನಡೆಸಲು 64 ಸಾಮಾನ್ಯ ವೀಕ್ಷಕರು, 32 ಪೊಲೀಸ್ ವೀಕ್ಷಕರು, 76 ಖರ್ಚು ವೀಕ್ಷಕರು ಸೇರಿ 172 ವೀಕ್ಷಕರನ್ನು ನೇಮಕ ಮಾಡಲಾಗಿದೆ. ಹೆಚ್ಚುವರಿಯಾಗಿ ಕೆಲವು ರಾಜ್ಯಗಳಲ್ಲಿ ವಿಶೇಷ ವೀಕ್ಷಕರನ್ನೂ ನೇಮಿಸಲಾಗಿದೆ. ಜೊತೆಗೆ ಒಟ್ಟು 201 ಅಂತಾರಾಷ್ಟ್ರೀಯ ಗಡಿ ಚೆಕ್ ಪೋಸ್ಟ್‌ಗಳು, 906 ಅಂತಾರಾಜ್ಯ ಗಡಿ ಚೆಕ್ ಪೋಸ್ಟ್‌ಗಳಲ್ಲಿ ಯಾವುದೇ ಅಕ್ರಮ ಮದ್ಯ, ಡ್ರಗ್ಸ್, ನಗದು ಸಾಗಾಟದ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗಿದೆ. 2,707 ಫ್ಲೈಯಿಂಗ್ ಸ್ಕ್ವಾಡ್‌ಗಳು, 560 ವಿಡಿಯೋ ವೀಕ್ಷಣಾ ತಂಡಗಳ ಸೇರಿ ಹಲವು ತಂಡಗಳು ಚುನಾವಣಾ ಕರ್ತವ್ಯದಲ್ಲಿ ನಿರತವಾಗಿವೆ ಎಂದು ಚುನಾವಣಾ ಆಯೋಗ ಹೇಳಿದೆ.

RELATED ARTICLES
- Advertisment -
Google search engine

Most Popular