Tuesday, December 16, 2025
Google search engine

Homeರಾಜ್ಯಲೋಕಾಯುಕ್ತ ದಾಳಿ : ಹಣ ಕಮೋಡ್‌ಗೆ ಸುರಿದ ಅಧಿಕಾರಿ!

ಲೋಕಾಯುಕ್ತ ದಾಳಿ : ಹಣ ಕಮೋಡ್‌ಗೆ ಸುರಿದ ಅಧಿಕಾರಿ!

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಹಲವು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದು, ಶಿವಮೊಗ್ಗ, ಧಾರವಾಡ ಹಾಗೂ ವಿಜಯನಗರ ಸೇರಿದಂತೆ ರಾಜ್ಯದ ಹಲವು ಕಡೆ ಅಧಿಕಾರಿಗಳಿಗೆ ಸೇರಿದ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಇನ್ನೂ ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ರೂಪ್ಲಾ ನಾಯ್ಕ್ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಸುದೀರ್ಘ ಪರಿಶೀಲನೆ ನಡೆಸುತ್ತಿದ್ದು, ಇಂದು ಬೆಳಗ್ಗೆಯಿಂದಲೇ ಅಧಿಕಾರಿಗಳ ದಾಖಲೆಗಳು, ಬ್ಯಾಂಕ್ ಖಾತೆಗಳು, ಆಸ್ತಿ ದಾಖಲೆಗಳು ಸೇರಿದಂತೆ ವಿವಿಧ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇದರ ಜೊತೆಗೆ, ರೂಪ್ಲಾ ನಾಯ್ಕ್ ಅವರ ಕುಟುಂಬ ನೆಲೆಸಿರುವ ಬೆಂಗಳೂರಿನ ನಿವಾಸದ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಅಲ್ಲಿ ಕೂಡ ಆಸ್ತಿ ಸಂಬಂಧಿತ ದಾಖಲೆಗಳ ಶೋಧ ಕಾರ್ಯ ಮುಂದುವರಿದಿದೆ.

ಧಾರವಾಡದಲ್ಲಿ ಹಣ ಕಮೋಡ್‌ಗೆ ಸುರಿದ ಅಧಿಕಾರಿ :

ಇತ್ತ ಬೆಳಗಾವಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿರುವ ರಾಜಶೇಖರ್​ ಅವರ ಧಾರವಾಡದ ಸಿಲ್ವರ್ ಆರ್ಚೆಡ್ ಬಡಾವಣೆಯಲ್ಲಿರುವ ನಿವಾಸದ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ರಾಜಶೇಖರ್ ಅವರಿ​​ಗೆ ಸೇರಿದ ಒಟ್ಟು ಮೂರು ಕಡೆ ದಾಳಿ​​ ನಡೆದಿದೆ. ರಾಣಿ ಚೆನ್ನಮ್ಮ ನಗರದಲ್ಲಿರುವ ರಾಜಶೇಖರ್​ಗೆ ಸೇರಿದ ಖಾಸಗಿ ಕಚೇರಿ, ಯರಿಕೊಪ್ಪ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೂ ದಾಳಿ ನಡೆಸಲಾಗಿದೆ. ಈ ವೇಳೆ ಲೋಕಾಯುಕ್ತ ಸಿಬ್ಬಂದಿ ಕಂಡು ಬೆದರಿದ ರಾಜಶೇಖರ್ ಸುಮಾರು 50 ಸಾವಿರ ರೂ. ಹಣವನ್ನು ಕಮೋಡ್‌ಗೆ ಸುರಿದು ಫ್ಲಶ್​​ ಮಾಡಿದ್ದು, ಸುಮಾರು ಅರ್ಧಗಂಟೆ ಕಾಲ ಲೊಕಾಯುಕ್ತ ಪೊಲೀಸರನ್ನು ಮನೆ ಹೊರಗೆ ಕಾಯಿಸಿ ಬಳಿಕ ಬಾಗಿಲು ತೆಗೆದಿದ್ದಾರೆ ಎನ್ನಲಾಗಿದೆ.

ವಿಜಯನಗರದಲ್ಲೂ ರೇಡ್ :

ಇನ್ನೂ ವಿಜಯನಗರ ಡಿಎಚ್‌ಒ ಡಾ.ಎಲ್.ಆರ್. ಶಂಕರ್ ನಾಯ್ಕ್ ಅವರ ಮನೆ, ಕಚೇರಿ ಹಾಗೂ ಪತ್ನಿ ನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಶಂಕರ್ ರವರು ತಮ್ಮ ಮನೆಯ ಸಮೀಪ ಖಾಸಗಿ ಆಸ್ಪತ್ರೆಯನ್ನು ಸಹ ನಡೆಸುತ್ತಿದ್ದು, ಲೋಕಾಯುಕ್ತ ಅಧಿಕಾರಿಗಳು ಅಲ್ಲಿಗೆ ಸಹ ತೆರಳಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular