Monday, September 1, 2025
Google search engine

Homeಸಿನಿಮಾಲೋಕಾಯುಕ್ತ ತನಿಖೆಯಲ್ಲಿ ಬಹಿರಂಗ: ನಟಿ ರಾಧಿಕಾ ಸಚಿವ ಜಮೀರ್‌ಗೆ ನೀಡಿದ 2 ಕೋಟಿ ರೂ....

ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗ: ನಟಿ ರಾಧಿಕಾ ಸಚಿವ ಜಮೀರ್‌ಗೆ ನೀಡಿದ 2 ಕೋಟಿ ರೂ. ಸಾಲ ಒಪ್ಪಿಗೆ

ಬೆಂಗಳೂರು: ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ನಟಿ ರಾಧಿಕಾ ಕುಮಾರಸ್ವಾಮಿ ಅವರು 2 ಕೋಟಿ ರೂ. ಸಾಲ ನೀಡಿರುವ ವಿಚಾರ ಲೋಕಾಯುಕ್ತ ತನಿಖೆಯಿಂದ ಪತ್ತೆಯಾಗಿದೆ. ಈ ವಿಚಾರವನ್ನು ಸ್ವತಃ ನಟಿ ಅಧಿಕಾರಿಗಳ ಮುಂದೆ ಬಹಿರಂಗಪಡಿಸಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು, ವಸತಿ ಸಚಿವ ಜಮೀರ್‌ ಅವರ ಆದಾಯದ ಮೂಲಗಳನ್ನು ಶೋಧಿಸಿದಾಗ ಸಾಲ ಕೊಟ್ಟವರ ಪಟ್ಟಿ ಸಿಕ್ಕಿದೆ. ಇದರಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಹೆಸರು ಕೂಡಾ ಉಲ್ಲೇಖವಾಗಿತ್ತು. ರಾಧಿಕಾ ಅವರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದು, ಅವರಿಂದ ವಿವರಣೆಗಳನ್ನು ಪಡೆದುಕೊಂಡಿದ್ದಾರೆ. ಈ ವೇಳೆ ರಾಧಿಕಾ ತಾವು ಸಚಿವ ಜಮೀರ್ ಅವರಿಗೆ ಸಾಲ ಕೊಟ್ಟಿದ್ದನ್ನು ಸ್ವತಃ ಒಪ್ಪಿಕೊಂಡಿದ್ದಾರೆ. ಅವರ ಅಧಿಕೃತ ಹೇಳಿಕೆಯ್ನು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.

2019ರಲ್ಲಿ ಐ ಮಾನಿಟರಿ ಅಡ್ವೈಸರಿ ಕಂಪನಿಯ ಬಹುಕೋಟಿ ವಂಚನೆ ಹಗರಣ ಬೆಳಕಿಗೆ ಬಂದಾಗ ಆ ವಂಚಕ ಕಂಪನಿಯೊಂದಿಗೆ ನಂಟು ಹೊಂದಿದ್ದ ಆರೋಪದ ಮೇರೆಗೆ ಜಮೀರ್‌ ಅವರ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿತ್ತು. ಇಡಿ ವರದಿ ಆಧರಿಸಿ ಆಗಿನ ಮೈತ್ರಿ ಸರ್ಕಾರದಲ್ಲೂ ಸಚಿವರಾಗಿದ್ದ ಜಮೀರ್ ಅವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಭ್ರಷ್ಟಾಚಾರ ನಿಗ್ರಹ ದಳ (ACB) ಪ್ರಕರಣ ದಾಖಲಾಗಿತ್ತು.

ಎಸಿಬಿ ರದ್ದುಗೊಂಡ ಬಳಿಕ ಪ್ರಕರಣದ ತನಿಖೆ ಲೋಕಾಯುಕ್ತ ಪೊಲೀಸರಿಗೆ ವರ್ಗವಾಯಿತು. ಈ ಹಿನ್ನೆಲೆ ಸಚಿವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಸಚಿವ ಜಮೀರ್ ಸೇರಿ ಹಲವು ಜನರ ವಿಚಾರಣೆ ಯನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.

ಇನ್ನು ರಾಧಿಕಾ ಅವರು, 2012ರಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಮ್ಯಾ ಅಭಿನಯದ ಲಕ್ಕಿ ಸಿನಿಮಾ ನಿರ್ಮಾಣ ಮಾಡಿದ್ದೆ. ಮನರಂಜನಾ ಚಾನೆಲ್‌ಗಳಿಗೆ ಈ ಸಿನಿಮಾದ ಸ್ಯಾಟಲೈಟ್ ಹಕ್ಕು ಹಾಗೂ ಚಲನಚಿತ್ರದ ಯಶಸ್ವಿನಿಂದ ಸಂಪಾದಿಸಿದ ಹಣದಲ್ಲಿ 2 ಕೋಟಿ ರೂ.ಯನ್ನು ಸಚಿವರಿಗೆ ನೀಡಿದ್ದೆ ಎಂದು ತಿಳಿಸಿದ್ದಾರೆ. ಈ ಹೇಳಿಕೆ ದಾಖಲಿಸಿಕೊಂಡ ಪೊಲೀಸರು, ತಮ್ಮ ಹೇಳಿಕೆಗೆ ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ರಾಧಿಕಾ ಅವರಿಗೆ ಸೂಚಿಸಿದ್ದಾರೆ. ಇದಕ್ಕೆ ಒಪ್ಪಿಕೊಂಡಿರುವ ರಾಧಿಕಾ ಕೆಲವೇ ದಿನಗಳಲ್ಲಿ ಸಚಿವರಿಗೆ ನೀಡಿದ್ದ ಹಣದ ಕುರಿತು ಮತ್ತಷ್ಟು ದಾಖಲೆಗಳನ್ನು ಕೊಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಇಷ್ಟು ಮಾತ್ರವಲ್ಲದೇ ಜಮೀರ್ ಅವರಿಗೆ ಸಾಲ ಕೊಟ್ಟವರ ಪಟ್ಟಿಯಲ್ಲಿ ಮಾಜಿ ಸಂಸದ ಹಾಗೂ ಜೆಡಿಎಸ್‌ ಮುಖಂಡ ಕುಪ್ಪೇಂದ್ರ ರೆಡ್ಡಿ ಅವರ ಹೆಸರು ಕೂಡಾ ಇದೆ. ಈಗಾಗಲೇ ಅವರಿಗೂ ಹಣದ ಲೆಕ್ಕ ನೀಡುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಆದರೆ ಈವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular