Wednesday, May 21, 2025
Google search engine

Homeಅಪರಾಧಲಾಂಗು  ಮಚ್ಚು ಹಿಡಿದು ಕಾರು ಅಡ್ಡಗಟ್ಟಿ ದರೋಡೆ: ಮೊಬೈಲ್, ಮಾಂಗಲ್ಯ ಸರ ಕಿತ್ತು ಪರಾರಿ

ಲಾಂಗು  ಮಚ್ಚು ಹಿಡಿದು ಕಾರು ಅಡ್ಡಗಟ್ಟಿ ದರೋಡೆ: ಮೊಬೈಲ್, ಮಾಂಗಲ್ಯ ಸರ ಕಿತ್ತು ಪರಾರಿ

ನಂಜನಗೂಡು: ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಮಚ್ಚು ಲಾಂಗುಗಳನ್ನು ತೋರಿಸಿ ಮೊಬೈಲ್‌ ಮತ್ತು ಮಾಂಗಲ್ಯ ಸರವನ್ನು ಕಿತ್ತುಕೊಂಡು ದರೋಡೆ ಮಾಡಿರುವ ಘಟನೆ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯ ನಂಜನಗೂಡು ತಾಲೂಕಿನ ಹೊಸಹಳ್ಳಿ ಗೇಟ್ ಬಳಿ ನಡೆದಿದೆ.

ಮೈಸೂರಿನ ಅಶೋಕ ಬಡಾವಣೆಯ ನಿವಾಸಿಗಳಾದ ಜಯಶ್ರೀ (45) ಮತ್ತು ಮಕ್ಕಳಾದ ವಿಶಾಲ್ ಮತ್ತು ವಿಜಯ್ ದರೋಡೆ ಒಳಗಾದವರು.

ಜಯಶ್ರೀ ಅವರು ತಮ್ಮ ಮಕ್ಕಳಾದ ವಿಶಾಲ್ ಮತ್ತು ವಿಜಯ್ ರವರ ಜೊತೆ ತಮ್ಮ ಕಾರ್‌ನಲ್ಲಿ ಕೇರಳದ ಕ್ಯಾಲಿಕೆಟ್‌ ಗೆ ತಮ್ಮ ಮಗಳ ಮನೆಗೆ ತೆರಳಿದ್ದರು. ಶುಕ್ರವಾರ ರಾತ್ರಿ 7ರ ಸಮಯದಲ್ಲಿ ಮೈಸೂರಿಗೆ ವಾಪಸ್ ಆಗುವ ವೇಳೆ  ಹೊಸಹಳ್ಳಿ ಗೇಟ್ ಬಳಿ ಇನೋವಾ ಕಾರಿನಲ್ಲಿ 4 ಜನ ಮತ್ತು ಐ20 ಕಾರಿನಲ್ಲಿ 4 ಜನ ಒಟ್ಟು 8 ಮಂದಿ ದರೋಡೆಕೋರರು ಕಾರನ್ನು ಅಡ್ಡಗಟ್ಟಿ ಇನ್ನೋವಾ ಕಾರಿನಲ್ಲಿದ್ದ 4 ಜನ ದರೋಡೆಕೋರರು ಕಾರಿನ ಕೆಳಗಿಳಿದು ಜಯಶ್ರೀ ಅವರಿದ್ದ ಕಾರಿನ ಮೇಲೆ ಲಾಂಗ್ ಗಳನ್ನು ಕಾರಿನ ಗ್ಲಾಸ್‌ ನ ಮೇಲೆ ಬೀಸಿ 3 ಕಡೆ ಪುಡಿ ಮಾಡಿದ್ದಾರೆ.

ನಂತರ ಕಾರಿನಲ್ಲಿದ್ದವರ 2 ಮೊಬೈಲ್ ಗಳನ್ನು ಕಸಿದುಕೊಂಡು ನಂತರ ಜಯಶ್ರೀ ಅವರ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾರೆ.

ಇಷ್ಟರಲ್ಲಾಗಲೇ ಜನರೆಲ್ಲರೂ ಜಮಾವಣೆಯಾಗುತ್ತಿದ್ದಂತೆ ದರೋಡೆಕೋರರು ತಮ್ಮ ಇನೋವಾ ಕಾರ್‌ ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.

ವಿಷಯ ತಿಳಿದು ನಂಜನಗೂಡು ಗ್ರಾಮಾಂತರ ಪೊಲಿಸ್ ಠಾಣೆಯ ವೃತ್ತ ನಿರೀಕ್ಷಕ ಶಿವನಂಜ ಶೆಟ್ಟಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular