ಚನ್ನಪಟ್ಟಣ: ಕರ್ನಾಟಕದ ಬದಲು ಬಸವ ನಾಡು ಎಂದು ಕರೆಯುವುದು ಸೂಕ್ತ ಎಂದು ಹೇಳಿರುವ ಸಚಿವ ಎಂ.ಬಿ. ಪಾಟೀಲ್‌ರ ಹೇಳಿಕೆ ಖಂಡಿಸಿ ಕಾವೇರಿ ಸರ್ಕಲ್‌ನಲ್ಲಿ ಕ.ಕ.ಜ.ವೇದಿಕೆಯು ಸಚಿವ ಎಂ.ಬಿ. ಪಾಟೀಲ್‌ರವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ರಮೇಶ್‌ಗೌಡ ಕಳೆದ ೧೫ ವರ್ಷದ ಹಿಂದಿನಿಂದಲೂ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯ ಅಪಸ್ವರ ಕೇಳಿ ಬಂದಿದ್ದು, ದಿ ಉಮೇಶ್ ಕತ್ತಿ ಅದರ ಮುಂಚೂಣಿಯಲ್ಲಿದ್ದರು. ಅವರ ಮುಂದುವರಿದ ಭಾಗದಂತಿರುವ ಎಂ.ಬಿ. ಪಾಟೀಲ್‌ರು ಉತ್ತರ ಕರ್ನಾಟಕದ ರಾಜ್ಯದ ಬದಲು ಬಸವನಾಡು ಎಂಬ ಬೇಡಿಕೆಯನ್ನು ಮುನ್ನೆಲೆಗೆ ತಂದು ರಾಜ್ಯವನ್ನು ಇಬ್ಬಾಗ ಮಾಡುವ ಹುನ್ನಾರ ಮಾಡಿದ್ದಾರೆ.
ಬಸವೇಶ್ವರರ ಬಗ್ಗೆ ನಮಗೆ ಗೌರವವಿದ್ದು ಅವರ ಹೆಸರನ್ನು ಯಾವುದಾದರೂ ಜಿಲ್ಲೆಗೆ, ವಿ.ವಿ.ಗೆ, ರಸ್ತೆಗೆ ನಾಮಕರಣ ಮಾಡಲಿ. ಅದೂ ಅಲ್ಲದೆ ಬೆಳಗಾವಿಯ ಸುವರ್ಣಸೌಧಕ್ಕೆ ಬಸವೇಶ್ವರರ ಹೆಸರನ್ನು ನಾಮಕರಣ ಮಾಡಲಿ ನಮ್ಮದೇನು ಅಭ್ಯಂತರವಿಲ್ಲ ಆದರೆ ರಾಜ್ಯಕ್ಕೆ ಕರ್ನಾಟಕ ಎಂಬ ಸುಂದರ ಹೆಸರಿನ ಬದಲು ಬಸವ ನಾಡು ಎಂದು ನಾಮಕರಣಕ್ಕೆ ನಮ್ಮ ವಿರೋಧವಿದೆ ಎಂದರು. ಈ ಹೇಳಿಕೆ ಹಿಂದೆ ಹತ್ತು ಹಲವು ಜಿಲ್ಲೆಗಳನ್ನು ಬೇರ್ಪಡಿಸಿ ಬಸವನಾಡು ಎಂದು ನಾಮಕರಣ ಮಾಡಿಕೊಂಡು ಅಲ್ಲಿಯ ರಾಜ್ಯಕ್ಕೆ ಎಂ.ಬಿ.ಪಾಟೀಲ್‌ರು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ ಎಂದು ಆರೋಪಿಸಿದರು.
ಹಾಗೊಂದು ವೇಳೆ ಆದರೆ ಹಳೆ ಮೈಸೂರಿನವರು ಕೆಂಪೇಗೌಡರ ರಾಜ್ಯ ಎಂದು ನಾಮಕರಣಕ್ಕೆ ಒತ್ತಾಯಿಸಬಹುದು, ದಕ್ಷಿಣ ಕನ್ನಡದವರು ಮತ್ತೊಂದು ರಾಜ್ಯ ಎಂದು ಕೇಳಬಹುದು. ಒಂದಾಗಿರುವ ರಾಜ್ಯ ಒಡೆಯಬಹುದು ಹಲಮಹನೀಯರ ಏಕೀಕರಣದ ಕನಸು ನುಚ್ಚುನೂರಾಗಿ ರಾಜ್ಯ ವಿಭಜನೆಯತ್ತ ಹೋಗಬಹುದೆಂಬ ಆತಂಕವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಯೋಗೇಶ್ ಗೌಡ , ರಾಜ್ಯ ಉಪಾಧ್ಯಕ್ಷ ಬೆಂಕಿ ಶ್ರೀಧರ್, ಡಾ. ರಾಜ್ ಕಲಾ ಬಳಗ ಮುಂಜುನಾಥ್, ಕಾರ್ಮಿಕ ಸಂಘಟನೆಯ ಕರ್ಣ, ಹೊನ್ನಪ್ಪ, ಚಿಕ್ಕಣ್ಣಪ್ಪ, ಟೈಲರ್ ಚಿಕ್ಕಯ್ಯ, ಕೂಡ್ಲೂರು ಮಹದೇವ್, ಟಯೋಟ ರಮೇಶ್, ತಸ್ಮಿಯಾಬಾನು, ಚಂದ್ರೇಗೌಡ, ಜಯಸಿಂಹ ಸುಧಾಕರ್, ಚಿಕ್ಕಣ್ಣ, ಸಿದ್ದರಾಜು, ರಾಜಮ್ಮ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.