Thursday, May 22, 2025
Google search engine

Homeರಾಜ್ಯಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯಿಂದ ಜರುಗಿದ ಮಾದಪ್ಪನ ರಥೋತ್ಸವ

ಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯಿಂದ ಜರುಗಿದ ಮಾದಪ್ಪನ ರಥೋತ್ಸವ

ಮಹದೇಶ್ವರ ಬೆಟ್ಟ (ಚಾಮರಾಜನಗರ): ಪ್ರಸಿದ್ಧ  ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾದಪ್ಪನ ರಥೋತ್ಸವ ಮಂಗಳವಾರ ಬೆಳಿಗ್ಗೆ ವಿಜೃಂಭಣೆಯಿಂದ ನೆರವೇರಿತು.

ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ಉಘೇ ಮಾದಪ್ಪ, ಮಾಯ್ಕಾರ ಘೋಷಣೆಗಳು ಮುಗಿಲು ಮುಟ್ಟಿದವು.

ಮಂಗಳವಾರ ಬೆಳಿಗ್ಗೆ 7:30 ರಿಂದ 9:30ರ ನಡುವಿನ ಶುಭ ಮುಹೂರ್ತದಲ್ಲಿ ತೇರನ್ನು ಎಳೆಯಲಾಯಿತು.

ಬೇಡಗಂಪಣ ಸಮುದಾಯದ ಸಂಪ್ರದಾಯದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.  ಸಮುದಾಯದ 101 ಹೆಣ್ಣು ಮಕ್ಕಳು ಬೆಲ್ಲದ ಆರತಿಯೊಂದಿಗೆ, ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಮಹದೇಶ್ವರ ಸ್ವಾಮಿಯ  ಉತ್ಸವ ಮೂರ್ತಿಯನ್ನು ಬಿಳಿ ಆನೆ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.

ದೇವಾಲಯದ ಒಳ ಆವರಣದಲ್ಲಿ ಸ್ವಾಮಿಯ ಉತ್ಸವವನ್ನು ನೆರವೇರಿಸಿದ ಬಳಿಕ, ಉತ್ಸವಮೂರ್ತಿಯನ್ನು ಹೊರ ಆವರಣಕ್ಕೆ ತಂದು ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

ರಥದ ಮುಂಭಾಗ ನಿಂತಿದ್ದ ಹೆಣ್ಣು ಮಕ್ಕಳು ಸ್ವಾಮಿಗೆ ಬೆಲ್ಲದ ಆರತಿಯನ್ನು ಬೆಳಗಿದರು. ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ನೂರಾರು ಭಕ್ತರು ಮಾದಪ್ಪನ ಪರ ಉದ್ಘೋಷ ಹೇಳುತ್ತಾ ತೇರನ್ನು ಎಳೆದರು.

ರಥೋತ್ಸವವನ್ನು ಕಣ್ತುಂಬಿಕೊಂಡ ಭಕ್ತರು ರಥಕ್ಕೆ ಹೂವು ಹಣ್ಣು ದವಸ ಧಾನ್ಯ ಎಸೆದು ಭಕ್ತಿ ಸಮರ್ಪಿಸಿದರು.

ಜಾತ್ರೆಗೆ ತೆರೆ: ರಥೋತ್ಸವದೊಂದಿಗೆ ನಾಲ್ಕು ದಿನಗಳ ಯುಗಾದಿ ಜಾತ್ರೆಗೆ ತೆರೆ ಬಿದ್ದಿದೆ. ಏ.6ರಂದು ಜಾತ್ರೆಗೆ ಚಾಲನೆ ನೀಡಲಾಗಿತ್ತು.

RELATED ARTICLES
- Advertisment -
Google search engine

Most Popular