ಮಧ್ಯಪ್ರದೇಶ: ಮಧ್ಯಪ್ರದೇಶದ ನರಸಿಂಗಪುರ ಜಿಲ್ಲಾಸ್ಪತ್ರೆಯಲ್ಲಿ ಎಲ್ಲರ ಮುಂದೆ ನಡೆದ ಭೀಕರ ಹತ್ಯೆ ಪ್ರಕರಣದಿಂದ ರಾಜ್ಯದಲ್ಲಿ ಭೀತಿ ಮನೆ ಮಾಡಿದೆ. 12ನೇ ತರಗತಿ ಓದುತ್ತಿದ್ದ 19 ವರ್ಷದ ಸಂಧ್ಯಾ ಚೌಧರಿ ಎಂಬ ಯುವತಿಯನ್ನು, ಒನ್ ಸೈಡ್ ಲವ್ ಮಾಡಿದ ಅಭಿಷೇಕ್ ಕೌಸ್ತಿ ಎಂಬಾತ ಎಮರ್ಜೆನ್ಸಿ ವಾರ್ಡ್‌ನಲ್ಲೇ ಕುತ್ತಿಗೆ ಕುಯ್ಯುವ ಮೂಲಕ ಹತ್ಯೆ ಮಾಡಿದ.
ಅಭಿಷೇಕ್, ಆಸ್ಪತ್ರೆಯೊಳಗೆ ಎಲ್ಲರ ಎದುರಲ್ಲೇ 10 ನಿಮಿಷಗಳ ಕಾಲ ಯುವತಿಯನ್ನು ಕೆಳಕ್ಕೆ ಎಳೆಯುತ್ತಾ ಎದೆಯ ಮೇಲೆ ಕುಳಿತು ಕತ್ತಿಗೆ ಚೂರಿ ಇರಿದು ಹತ್ಯೆ ಮಾಡಿದ್ದಾನೆ. ಇನ್ನೂ ಅಮಾನವೀಯವೆಂದರೆ, ಈ ಘಟನೆಯನ್ನು ಕೆಲವರು ಸೆಲ್ಫೋನ್‌ನಲ್ಲಿ ವಿಡಿಯೋ ತೆಗೆದುಕೊಂಡಿದ್ದು, ಯಾರೂ ಆಕೆಯನ್ನು ರಕ್ಷಿಸಲು ಮುನ್ನುಗ್ಗಿಲ್ಲ.
ಆಸ್ಪತ್ರೆಯಲ್ಲಿ ಹತ್ತಾರು ಜನರಿದ್ದರೂ ಸಹಾಯ ಮಾಡದಿರುವುದು ಆಘಾತದ ಸಂಗತಿ. ಹತ್ಯೆ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಆರೋಪಿಯು ವಿಫಲಯತ್ನ ಬಳಿಕ ಬೈಕ್ ಏರಿ ಪರಾರಿಯಾದ. ಸ್ನೇಹಿತನನ್ನು ಭೇಟಿಗೆ ಬಂದಿದ್ದ ಸಂಧ್ಯಾ, ಆಸ್ಪತ್ರೆ ಪ್ರವೇಶಿಸುತ್ತಿದ್ದಾಗಲೇ ಅಭಿಷೇಕ್ ನಿಂದ ಹತ್ಯೆಯಾದಳು.
ಘಟನೆಯ ಕುರಿತು ಮಧ್ಯಾಹ್ನ3 ಗಂಟೆಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ನಂತರ ಪ್ರತಿಭಟನೆಯಲ್ಲಿ ತೊಡಗಿದ ಕುಟುಂಬಸ್ಥರ ಒತ್ತಾಯಕ್ಕೆ ಮಣಿದು ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರು. ಆರೋಪಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಪೊಲೀಸರಿಂದ ಭರವಸೆ ಲಭಿಸಿದೆ.
ಈ ಹತ್ಯೆ, ಒನ್ ಸೈಡ್ ಲವ್‌ನ ಬೆಲೆ ಎಷ್ಟು ಭೀಕರವಾಗಬಹುದು ಎಂಬುದನ್ನು ತೋರಿಸಿದೆ. ಇದೀಗ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಮಾನವೀಯತೆಯ ಕೊರತೆಯ ಬಗ್ಗೆ ಸಮಾಜದಲ್ಲಿ ಆಲೋಚನೆ ಮೂಡಿಸಿದೆ.