ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಹಾಪುರ ಪ್ರದೇಶದಲ್ಲಿರುವ ಖಾಸಗಿ ಆರ್.ಎಸ್. ದಮಾನಿ ಶಾಲೆಯಲ್ಲಿ, 5 ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರನ್ನು ಋತುಮತಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ನೆಪದಲ್ಲಿ ವಿವಸ್ತ್ರಗೊಳಿಸಿ ಅವಮಾನಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದ ನಂತರ, ಬಾಲಕಿಯರನ್ನು ಸಭಾಂಗಣಕ್ಕೆ ಕರೆಸಿ ಅವಮಾನಕಾರಿ ಪ್ರಶ್ನೆಗಳು ಕೇಳಲಾಗಿದೆ. ಬಳಿಕ ಶಾಲೆಯ ಮಹಿಳಾ ಸಹಾಯಕಿ ವಿದ್ಯಾರ್ಥಿನಿಯರನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಅವರ ಒಳಉಡುಪುಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ ಎಂಬ ದೂರು ಪೋಷಕರಿಂದ ಬಂದಿದೆ.
ಈ ಕುರಿತು ಶಾಲಾ ಪ್ರಾಂಶುಪಾಲರು, ನಾಲ್ವರು ಶಿಕ್ಷಕರು ಸೇರಿದಂತೆ 8 ಜನರ ವಿರುದ್ಧ ಪೋಕ್ಸೊ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಘಟನೆಯ ವಿರುದ್ಧ ಆಕ್ರೋಶಗೊಂಡ ಪೋಷಕರು ಶಾಲೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಝಲ್ಟೆ, ಈ ಅವಮಾನಕಾರಿ ವರ್ತನೆಗೆ ಸಂಬಂಧಿಸಿ ಸಂಪೂರ್ಣ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.