Thursday, February 19, 2026
Google search engine

Homeರಾಜ್ಯನಂಬಿಕೆಯನ್ನು ಉಳಿಸಿಕೊಳ್ಳುವುದು ಪತ್ರಿಕೋದ್ಯಮದ ಮೂಲ ಧರ್ಮ : ಡಾ.ಜಿ.ಪರಮೇಶ್ವರ್

ನಂಬಿಕೆಯನ್ನು ಉಳಿಸಿಕೊಳ್ಳುವುದು ಪತ್ರಿಕೋದ್ಯಮದ ಮೂಲ ಧರ್ಮ : ಡಾ.ಜಿ.ಪರಮೇಶ್ವರ್

ತುಮಕೂರು : ಪತ್ರಕರ್ತರು ಸತ್ಯವನ್ನು ಮರೆಮಾಚಬಾರದು, ಸಮಾಜ ಎಲ್ಲವನ್ನೂ ಗಮನಿಸುತ್ತಿದೆ. ಜನರು ಮಾಧ್ಯಮಗಳ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ಪತ್ರಿಕೋದ್ಯಮದ ಮೂಲ ಧರ್ಮ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಅಕ್ಷರ ನಿಧಿ ಪ್ರತಿಭಾ ಪುರಸ್ಕಾರ ಹಾಗೂ ಡಾ.ಜಿ.ಪರಮೇಶ್ವರ್ ಕನ್ನಿಕಾ ಪರಮೇಶ್ವರಿ ಪ್ರತಿಭಾ ಪುರಸ್ಕಾರ ನಿಧಿ ವಿತರಣಾ ಸಮಾರಂಭದಲ್ಲಿ ಪತ್ರಕರ್ತರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಮಾತನಾಡಿದರು.

ಮಾಧ್ಯಮ ಕ್ಷೇತ್ರದಲ್ಲಿ ಬದಲಾವಣೆಗಳು ಆಗುತ್ತಿವೆ. ಆದರೆ ಸತ್ಯ ಮತ್ತು ವೃತ್ತಿ ಧರ್ಮವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ. ಪರಿಶೀಲನೆಯಿಲ್ಲದೆ ವದಂತಿ ಹಾಗೂ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಕಾಯ್ದೆ ಶೀಘ್ರದಲ್ಲೇ ಜಾರಿಗೆ ತರಲಾಗುತ್ತದೆ. ಯಾವುದೇ ವಿಷಯದ ಬಗ್ಗೆ ಸುದ್ದಿ ಅಥವಾ ಲೇಖನ ಪ್ರಕಟಿಸುವಾಗ ಮೂಲದ ವಿಶ್ವಾಸಾರ್ಹತೆ ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಮುಂದುವರೆದು, ಸಮಾಜ ಮಾಧ್ಯಮಗಳನ್ನು ಗಮನದಿಂದ ನೋಡುತ್ತದೆ, ಜನರು ನಂಬುತ್ತಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ಪತ್ರಿಕೋದ್ಯಮದ ಅಸ್ತಿತ್ವಕ್ಕೆ ಬಹಳ ಮುಖ್ಯ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸಮಾಜಕ್ಕೆ ಹೇಗೆ ಉತ್ತರದಾಯಕರೋ, ಅದೇ ರೀತಿ ಪತ್ರಕರ್ತರೂ ಸಾಮಾಜಿಕ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು. ವ್ಯಕ್ತಿ ಗೌರವ, ಖಾಸಗಿತನ ಹಾಗೂ ವ್ಯವಸ್ಥೆಯ ಗೌರವ ಕಾಪಾಡಬೇಕು. ಬರಹಗಳು ಸಮಾಜದಲ್ಲಿ ದ್ವೇಷ ಸೃಷ್ಟಿಸಬಾರದು ಎಂದರು.

ಇದೇ ಸಂದರ್ಭದಲ್ಲಿ ಶಿಕ್ಷಣ ಜೀವನವನ್ನು ಬದಲಾಯಿಸುವ ಶಕ್ತಿ ಹೊಂದಿದೆ. ನಾನು ಗ್ರಾಮೀಣ ಹಿನ್ನೆಲೆಯಿಂದ ಬೆಳೆದವನು, ನನ್ನ ಬದುಕಿನಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸಿದೆ. ಪತ್ರಕರ್ತರಾಗಿ ಸಣ್ಣ ಆದಾಯದಲ್ಲಿ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳುವುದು ಸವಾಲಿನ ಸಂಗತಿ. ಆದ್ದರಿಂದ ಪತ್ರಕರ್ತರ ಮಕ್ಕಳಿಗೆ ಉತ್ತೇಜನ ನೀಡಲು ಪ್ರೋತ್ಸಾಹಧನವನ್ನು ನೀಡುತ್ತಿದ್ದೇನೆ. ಇದನ್ನು ರಾಜಕೀಯ ದೃಷ್ಟಿಯಿಂದ ಕಾಣಬೇಡಿ ಎಂದು ಸ್ಪಷ್ಟಪಡಿಸಿದರು.

ಪತ್ರಕರ್ತರಿಗೆ ಸೂರಿನ ಗ್ಯಾರಂಟಿ : ತುಮಕೂರು ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ನೀಡುವ ಇಚ್ಛೆಯನ್ನು ಪುನರುಚ್ಚರಿಸಿದ ಸಚಿವ ಪರಮೇಶ್ವರ್ ಅವರು ಸೂರಿನ ಆಸರೆ ಗ್ಯಾರಂಟಿ ನೀಡಿ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸಾಧ್ಯವಾದರೆ ತಾಲೂಕು ಮಟ್ಟದಲ್ಲೇ ನಿವೇಶನ ನೀಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ಆರೋಗ್ಯ ಕಾರ್ಡ್ ಘೋಷಣೆ : ಸಿದ್ಧಾರ್ಥ ಆಸ್ಪತ್ರೆಯಲ್ಲಿ ಪತ್ರಕರ್ತರಿಗೆ ಉಚಿತ ಚಿಕಿತ್ಸೆಗೆ ಆರೋಗ್ಯ ಕಾರ್ಡ್ ನೀಡುವುದಾಗಿ ಘೋಷಿಸಿದ ಅವರು, ಕೆಯುಡಬ್ಲ್ಯುಜೆ ತುಮಕೂರು ಜಿಲ್ಲಾ ಘಟಕ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಶಾಸಕ ಜ್ಯೋತಿಗಣೇಶ್ ಮಾತನಾಡಿ, ಕೋವಿಡ್ ಸಮಯದಲ್ಲಿ ಪತ್ರಕರ್ತರ ಕಷ್ಟವನ್ನು ಸಮೀಪದಿಂದ ಕಂಡಿದ್ದೇನೆ. ಮಹಾನಗರ ಪಾಲಿಕೆಯಿಂದ ಆರೋಗ್ಯ ವಿಮೆ ಮಾಡಿಸಿದ್ದೆ. ಪ್ರತಿಭಾವಂತ ಮಕ್ಕಳಿಗೆ ನೀಡಿದ ಈ ಪ್ರೋತ್ಸಾಹ ಭವಿಷ್ಯಕ್ಕೆ ನಾಂದಿಯಾಗಲಿ ಎಂದು ಆಶಿಸಿದರು.

ಗ್ರಾಮಾಂತರ ಶಾಸಕ ಬಿ.ಸುರೇಶ್‍ಗೌಡ ಮಾತನಾಡಿ, ಪತ್ರಕರ್ತರಿಗೆ ನಿವೇಶನ ನೀಡಲು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಯತ್ನಿಸುವೆ. ಪತ್ರಕರ್ತರ ಬದುಕು ಆರ್ಥಿಕವಾಗಿ ಸದೃಢವಾಗಿಲ್ಲ. ಮಕ್ಕಳು ಇಂತಹ ಪ್ರೋತ್ಸಾಹ ಪಡೆದು ಸಾರ್ಥಕ ಬದುಕು ಕಟ್ಟಿಕೊಂಡರೆ ಸಂತೋಷವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೆಯುಡಬ್ಲ್ಯುಜೆ ಜಿಲ್ಲಾಧ್ಯಕ್ಷ ಎಲ್.ಯೋಗೇಶ್ ಮಾತನಾಡಿ, ಗ್ರಾಮೀಣ ಪತ್ರಕರ್ತರಿಗೆ ಸ್ಥಳೀಯವಾಗಿ ನಿವೇಶನ ಕಲ್ಪಿಸಲು ಪ್ರಯತ್ನಿಸುತ್ತಿದ್ದೇವೆ. ಶಿಕ್ಷಣ ಸಂಸ್ಥೆಗಳಲ್ಲಿ ರಿಯಾಯಿತಿ, ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಡ್ ಸೇರಿದಂತೆ ನೀಡಿದ್ದ ಭರವಸೆಗಳನ್ನು ಕಾರ್ಯರೂಪಕ್ಕೆ ತರಲು ಸಂಘಟಿತ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ 30 ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನಿಧಿ ನೀಡಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಸಂಘದ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular