ಶಿವಮೊಗ್ಗ: ಕಳೆದು ಹೋದ ಸಮಯ ಮರಳಿ ಬರುವುದಿಲ್ಲ. ಆದ್ದರಿಂದ ಈಗಿನಿಂದಲೇ ತಮ್ಮ ಮುಂದಿನ ವೃತ್ತಿ ಬದುಕಿನ ಕುರಿತು ಯೋಜನೆ ರೂಪಿಸಿಕೊಳ್ಳಬೇಕೆಂದು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಆನಂದ್ ಕುಮಾರ್ ತ್ರಿಪಾಠಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಹ್ಯಾದ್ರಿ ಕಲಾ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ ಇವರ ಸಹಯೋಗದಲ್ಲಿ ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪದವಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಿಮ್ಮ ಮುಂದಿನ ಭವಿಷ್ಯದ ಕುರಿತು ಯೋಜಿಸಿಕೊಳ್ಳಲು ಇದು ಸರಿಯಾದ ಸಮಯ. ನಿರ್ಣಾಯಕ ಅವಧಿಯಲ್ಲಿ ನೀವಿದ್ದೀರಿ.ಕಳೆದು ಹೋದ ಸಮಯ, ಅವಕಾಶಗಳು ಮತ್ತೆ ಲಭಿಸುವುದಿಲ್ಲ. ಆದ್ದರಿಂದ ಈಗಿನಿಂದಲೇ ತಮ್ಮ ಆಸಕ್ತಿದಾಯಕ ಕ್ಷೇತ್ರವನ್ನು ಗುರುತಿಸಿಕೊಂಡು, ಅಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕು.
ನಾನು ಮಾಡಬಲ್ಲೆ ಅನ್ನುವ ಸಂಕಲ್ಪ ಶಕ್ತಿಯೊಂದಿಗೆ ಮುನ್ನಡೆಯಬೇಕು. ಯಾರೂ ಕೂಡ ಶೇ.100 ಪರಿಪೂರ್ಣರಲ್ಲ. ಕಲಿಕೆ ವಿಚಾರದಲ್ಲಿ ಒಂದು ಶೈಕ್ಷಣಿಕ ಸಂಸ್ಥೆ ನಿಮಗೆ ಶೇ.25 ರಷ್ಟು ನೀಡಿದರೆ, ನಿಮ್ಮ ಶ್ರದ್ದೆ ಶೇ.25 ನೀಡುತ್ತದೆ, ನಿಮ್ಮ ಗೆಳೆಯರು ಶೇ.25 ನೀಡಬಹುದು ಹಾಗೂ ಬಾಕಿ ಶೇ.25 ರಷ್ಟು ಏನನ್ನೂ ಕಲಿಯದೇ ಹಾಗೇ ಇರುತ್ತೀರಿ. ಇದನ್ನು ಸಮಯವೇ ನಿಮಗೆ ಕಲಿಸುತ್ತದೆ ಎಂದ ಅವರು ಸದ್ಯಾದ್ರಿ ಕಾಲೇಜು ಒಂದು ಅತ್ಯುತ್ತಮ ಶೈಕ್ಷಣಿ ಸಂಸ್ಥೆಯಾಗಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ನೀವು ಇದರ ಸದುಪಯೋಗ ಪಡೆದುಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದು ದೇಶಕ್ಕೆ, ಪೋಷಕರಿಗೆ ಒಳ್ಳೆಯ ಹೆಸರು ತರಬೇಕೆಂದು ಹಾರೈಸಿದರು.
ರಾಗಿಗುಡ್ಡದಲ್ಲಿರುವ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪ್ರಾರಂಭವಾಗಿದೆ. ಪಿಯುಸಿ, ಪದವಿ ಪೂರೈಸಿದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಡಿಪ್ಲೊಮಾ ಇನ್ ಪೊಲೀಸ್ ಸೈನ್ಸ್, ಬ್ಯಾಚುಲರ್ ಆಫ್ ಆಟ್ರ್ಸ್ ಇನ್ ಸೆಕ್ಯುರಿಟಿ ಮ್ಯಾನೇಜ್‍ಮೆಂಟ್, ಸ್ನಾತಕೋತ್ತರ ಡಿಪ್ಲೊಮಾ ಇನ್ ಪೊಲೀಸ್ ಸೈನ್ಸ್ ಅಂಡ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗಳು ಲಭ್ಯವಿದ್ದು ಭದ್ರತೆ ಮತ್ತು ಪೊಲೀಸ್ ವಲಯದಲ್ಲಿ ಸಾಕಷ್ಟಯ ಉತ್ತಮ ಉದ್ಯೋಗ ಅವಕಾಶಗಳು ವಿದ್ಯಾರ್ಥಿಗಳಿಗೆ ಲಭಿಸಲಿದೆ.
ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿ ಹಾಗೂ ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷ ವೈ.ಹೆಚ್.ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಉಪನ್ಯಾಸ ಕಾರ್ಯಕ್ರಮಗಳ ಉಪಯೋಗ ಮಾಡಿಕೊಂಡು, ಅವಕಾಶಗಳನ್ನು ಬಳಸಿಕೊಂಡು ದೇಶ ಕಟ್ಟುವ ಕೆಲಸ ಮಾಡಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ಟಿ ಅವಿನಾಶ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕುರಿತು ಈಗಿನಿಂದಲೇ ಯೋಜನೆ ರೂಪಿಸಿಕೊಳ್ಳಬೇಕು. ಭವಿಷ್ಯದ ಕುರಿತು ಖಚಿತತೆ ಯಾರಿಗೂ ಇರುವುದಿಲ್ಲ. ಗೊಂದಲ ಸೃಷ್ಟಿಯಾಗುತ್ತದೆ. ಆದ್ದರಿಂದ ಈಗಿನಿಂದಲೇ ತಮ್ಮ ಮುಂದಿನ ವೃತ್ತಿ ಜೀವನದ ಕುರಿತು ಯೋಜಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇಂದಿನ ಶಿಕ್ಷಣ ಉದ್ದೇಶರಹಿತವಾಗುತ್ತದೆ. ಶಿಕ್ಷಕರು ಕೂಡ ವಿದ್ಯಾರ್ಥಿಗಳ ಔದ್ಯೋಗಿಕ ಅಭಿವೃದ್ದಿ ಕುರಿತಾದ ಅವಕಾಶಗಳ ಬಗ್ಗೆ ತಿಳಿಸಬೇಕು. ವಿದ್ಯಾರ್ಥಿಗಳನ್ನು ಅವಕಾಶಗಳ ಬಗ್ಗೆ ತಿಳಿದು, ಗುರುತಿಸಿ ಮುಂದುವರೆಯಬೇಕೆಂದ ಅವರು ಹಳೆಯ ವಿದ್ಯಾರ್ಥಿಗಳೊಂದಿಗೆ ಒಂದು ಸಂಸ್ಥೆ ಉತ್ತಮ ಬಾಂಧವ್ಯ ಹೊಂದಿರುವುದು ಸಹ ಮುಖ್ಯ ಎಂದರು.
ಬೆಂಗಳೂರಿನ ಮಲ್ನಾಡ್ ಕೋಚಿಂಗ್ ಸೆಂಟರ್‍ನ ತೀರ್ಥಹಳ್ಳಿಯ ಕೇಶವಮೂರ್ತಿ ಉದ್ಯೋಗ ಅವಕಾಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಳೆಯ ವಿದ್ಯಾರ್ಥಿ ಸಂಘದ ಸಂಚಾಲಕ ಡಾ.ಕೆ.ಎನ್.ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಎನ್‍ಎಸ್‍ಎಸ್ ಅಧಿಕಾರಿ ಘಟಕ-1ರ ಪ್ರಕಾಶ್ ಬಿ ಎನ್, ಘಟಕ-2 ರ ಡಾ.ಮುದುಕಪ್ಪ, ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಜರಿದ್ದರು