ವರದಿ: ಸ್ಟೀಫನ್ ಜೇಮ್ಸ್
ಹುಬ್ಬಳ್ಳಿ: ಜಾತಿ ಗಣತಿಯಲ್ಲಿ ಹಿಂದೂ ಎಂದು ದಾಖಲಿಸಲು ಒಪ್ಪಿದರೆ ಹುಬ್ಬಳ್ಳಿಯ ವೀರಶೈವ ಲಿಂಗಾಯತ ಏಕತಾ ಸಮಾವೇಶದ ನಿರ್ಣಯವನ್ನು ತಾನು ಸಹ ಒಪ್ಪಿಕೊಳ್ಳುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎಲ್ಲಿ ಹಿಂದೂ ಧರ್ಮವನ್ನು ಅವಮಾನಿಸುತ್ತಾರೋ ಅಂತಹ ಸಭೆಗೆ ನಾನು ಹೋಗುವುದಿಲ್ಲ. ನೀವು ಹಿಂದೂ ಧರ್ಮವನ್ನು ವಿರೋಧಿಸುವುದಾದರೆ ಮೊದಲು ಕೇಸರಿ ಹಾಗೂ ಖಾವಿ ಬಟ್ಟೆ ತೆಗೆದುಬಿಸಾಡಿ. ಅದು ಸನಾತನ ಹಿಂದೂ ಧರ್ಮದ ಸಂಸ್ಕೃತಿ, ಎಂದು ಹೇಳಿದರು.
ಇದೇ ಸಂದರ್ಭದಲ್ಲಿ, ಇಸ್ಲಾಂ ಮತ್ತು ಲಿಂಗಾಯತ ಧರ್ಮದಲ್ಲಿ ಸಾಮ್ಯತೆಗಳಿವೆ ಎಂಬ ನಿಜಗುಣಾನಂದ ಸ್ವಾಮೀಜಿಯ ಹೇಳಿಕೆಯನ್ನು ಟೀಕಿಸಿದ ಯತ್ನಾಳ್, ಲಕ್ಷ್ಮೀ ಪೂಜೆ ಯಾಕೆ ಮಾಡಬೇಕು ಎಂದು ಪ್ರಶ್ನಿಸುವವರು ವಿಭೂತಿ ಯಾಕೆ ಹಚ್ಚಿಕೊಳ್ಳಬೇಕು? ಗೋವಿನ ಸಗಣಿಯಿಂದಲೇ ವಿಭೂತಿ ಮಾಡಬೇಕೆಂದು ಯಾಕೆ? ಹೀಗಾದರೆ ನಾಯಿಯದೋ ಹಂದಿಯದೋ ಮಾಡಿಕೊಂಡು ಹಚ್ಚಿಕೊಳ್ಳಲಿ, ಎಂದು ವಾಗ್ದಾಳಿ ನಡೆಸಿದರು.