Friday, December 19, 2025
Google search engine

HomeದೇಶVB-G RAM G ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಯ ಎಚ್ಚರಿಕೆ ನೀಡಿದ ಮಲ್ಲಿಕಾರ್ಜುನ ಖರ್ಗೆ

VB-G RAM G ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಯ ಎಚ್ಚರಿಕೆ ನೀಡಿದ ಮಲ್ಲಿಕಾರ್ಜುನ ಖರ್ಗೆ

ಹೊಸದಿಲ್ಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು, ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್‌ಗಾಗಿ ವಿಕ್ಷಿತ್ ಭಾರತ್ ಗ್ಯಾರಂಟಿ ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೆಂಡಾಮಂಡಲರಾಗಿದ್ದಾರೆ. ‌

ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, MGNREGA ಯೋಜನೆಯ ಮರುನಾಮಕರಣ ನಿರ್ಧಾರದ ಹಿಂದೆ “ಪಿತೂರಿ” ಅಡಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ VB- G RAM G ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಇನ್ನೂ MGNREGA ಯೋಜನೆಯಿಂದ ಮಹಾತ್ಮ ಗಾಂಧಿ ಹೆಸರು ಕೈಬಿಟ್ಟಿರುವುದರ ಹಿಂದೆ ಷಡ್ಯಂತ್ರವಿದೆ. ಗಾಂಧಿ ಅವರ ಹೆಸರನ್ನು ಅಳಿಸುವ ಪಿತೂರಿ ಎಂದಿಗೂ ಸಫಲವಾಗುವುದಿಲ್ಲ. ಅಲ್ಲದೇ ಬಡವರ ಹಕ್ಕನ್ನು ಕಸಿದುಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್‌ ದೇಶಾದ್ಯಂತ ಚಳುವಳಿ ಆರಂಭಿಸಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ.

ಈ ವೇಳೆ ಮುಂಬರುವ ದಿನಗಳಲ್ಲಿ ಮೂರು ಕೃಷಿ ಕಾನೂನುಗಳಂತೆ, VB-G RAM G ಕಾನೂನನ್ನೂ ನೀವು ಹಿಂತೆಗೆದುಕೊಳ್ಳುವ ಸಮಯ ಬಂದೇ ಬರುತ್ತದೆ. ಜನರು ರಸ್ತೆಗಳನ್ನು ತಡೆದು ಪ್ರತಿಭಟಿಸುವ, ಗುಂಡೇಟಿನಿಂದ ಗಾಯಗೊಂಡು ಸಾಯುವ ಆಂದೋಲನವನ್ನು ನೀವು ಬಯಸುತ್ತೀರಾ? ಆಗ ಮಾತ್ರ ನೀವು ಕಾನೂನನ್ನು ಹಿಂತೆಗೆದುಕೊಳ್ಳುತ್ತೀರಾ?” ಎಂದು ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

ಮುಂದುವರೆದು, ದೇಶದ ಜನರು VB-G RAM G ಕಾನೂನು ವಿರುದ್ಧ ಬೀದಿಗಿಳಿದು ಪ್ರತಿಭಟಿಸಲಿದ್ದಾರೆ. ಅವರು ನಿಮ್ಮ ಗುಂಡುಗಳನ್ನು ಎದುರಿಸುತ್ತಾರೆಯೇ ಹೊರತು ಈ ಕಾನೂನನ್ನು ಎಂದಿಗೂ ಬೆಂಬಲಿಸುವುದಿಲ್ಲ. ನಾವು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷರು ತೀವ್ರ ವಾಗ್ದಾಳಿ ನಡೆಸಿದರು. VB-G RAM G ವಿಧೇಯಕಕ್ಕೆ ಲೋಕಸಭೆ ಅಂಕಿತ ಹಾಕಿದ್ದು, ಈ ಮಸೂದೆ ಬಗ್ಗೆ ಈಗ ರಾಜ್ಯಸಭೆ ಗಂಭೀರ ಚರ್ಚೆ ನಡೆಸುತ್ತಿದೆ. ಪ್ರತಿಪಕ್ಷ ಕಾಂಗ್ರೆಸ್‌ MGNREGA ಯೋಜನೆಯ ಮರುನಾಮಕರಣವನ್ನು ವಿರೋಧಿಸಿ ತೀವ್ರ ಪ್ರತಿಭಟನೆ ಆರಂಭಿಸಿದೆ. ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್‌ ಸಂಸದರು ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ.

ಈ ವೇಳೆ “MGNREGA ಹೆಸರನ್ನು ಬದಲಾಯಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಮಹಾತ್ಮ ಗಾಂಧಿ ಅವರಿಗೆ ಅಪಮಾನ ಮಾಡಿಲ್ಲ. ಬದಲಿಗೆ ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ತರಬಲ್ಲ ಉದ್ಯೋಗದ ಅಧಿಕಾರವನ್ನು ಕಸಿದುಕೊಂಡಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದಿದ್ದಾರೆ.

VB-G RAM G ಕಾನೂನು ಹಂತ ಹಂತವಾಗಿ ಗ್ರಾಮೀಣ ಭಾಗದ ಬಡವರಿಂದ ಅವರ ಉದ್ಯೋಗ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌, ಇದು ರಾಜ್ಯಗಳ ಮೇಲೆ ಹೆಚ್ಚಿನ ಹೊರೆ ಹಾಕಲಿದೆ ಎಂದು ಕಿಡಿಕಾರಿದ್ದು, ಲೋಕಸಭೆಯಲ್ಲಿ ಈ ವಿಚಾರವಾಗಿ ಮಾತನಾಡಿದ್ದ ಕಾಂಗ್ರೆಸ್‌ ಸಂಸದ ಶಶಿ ತರೂರ್‌, MGNREGAದಿಂದ ಗಾಂಧಿ ಹೆಸರನ್ನು ಕೈಬಿಡುವುದು ಅನೈತಿಕ ಎಂದು ಅಸಮಧಾನ ಹೊರಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

RELATED ARTICLES
- Advertisment -
Google search engine

Most Popular