ಮಂಡ್ಯ: ಮಂಡ್ಯದಲ್ಲಿ ಕಾವೇರಿಗಾಗಿ ಜಿಲ್ಲಾ ಹಿತರಕ್ಷಣಾ ಸಮಿತಿಯಿಂದ ನಡೆಯುತ್ತಿರುವ ನಿರಂತರ ಹೋರಾಟ100 ನೇ ದಿನಕ್ಕೆ ಕಾಲಿಟ್ಟಿದೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತರ ಧರಣಿ ನಡೆಯುತ್ತಿದ್ದು, ಇದರೊಂದಿಗೆ ಉಪವಾಸ ಸತ್ಯಾಗ್ರಹವು 19ನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಕೂಡ ಪ್ರತಿಭಟನೆ ನಡೆಸಿರು ಪ್ರತಿಭಟನಾಕಾರರು ಕಪ್ಪು ಬಾವುಟ ಹಿಡಿದು ಬೆಂ-ಮೈ ಹೆದ್ದಾರಿ ತಡೆದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗ್ತಿದೆ. ನಾಲೆಗಳ ಮೂಲಕ ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ. ರೈತರ ಹಿತಕಾಯುವಲ್ಲಿ ನಮ್ಮ ರಾಜ್ಯ ಸರ್ಕಾರವು ಜಾಣಕುರುಡು ಪ್ರದರ್ಶಿಸುತ್ತಿದೆ. ಬೆಳಗಾವಿ ಅಧಿವೇಶದಲ್ಲಿ ಕೆ.ಆರ್.ಪೇಟೆ ಶಾಸಕರು ಬಿಟ್ಟರೇ ಜಿಲ್ಲೆಯ ಯಾವ ಶಾಸಕರು ಕಾವೇರಿ ಬಗ್ಗೆ ಧ್ವನಿ ಎತ್ತಲಿಲ್ಲ. ನಮ್ಮ ಪಾಲಿಗೆ ಉಳಿದ ಶಾಸಕರು ಸತ್ತೋಗಿದ್ದಾರೆ ಎಂದು ಕಾವೇರಿ ವಿಚಾರದಲ್ಲಿ ಮೌನವಹಿಸಿದ ಕಾವೇರಿಕೊಳ್ಳದ ಶಾಸಕರ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ಕಾವೇರಿ ಬಗ್ಗೆ ಸುದೀರ್ಘ ಚರ್ಚೆ ಮಾಡಲಿ. ರೈತರಿಗೆ ಬರ ಪರಿಹಾರ ನೀಡಬೇಕು. ಕಾವೇರಿ ವಿಚಾರದಲ್ಲಿ ಸರ್ಕಾರ ಧೃಡ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಶಾಸಕರು, ಸಚಿವರ ಮನೆ ಮುಂದೆ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ರೈತರು ಎಚ್ಚರಿಕೆ ಕೊಟ್ಟಿದ್ದಾರೆ.