ಮಂಡ್ಯ: ಈ ಬಾರಿ ಸೆಪ್ಟೆಂಬರ್ 25 ರಿಂದ 28 ರವರೆಗೆ ನಾಲ್ಕು ದಿನಗಳ ಕಾಲ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಮಂಡ್ಯದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸೆಪ್ಟೆಂಬರ್ 25 ರಂದು ಮಧ್ಯಾಹ್ನ 3 ಗಂಟೆಗೆ ಮೆರವಣಿಗೆಗೆ ಕಿರಂಗೂರು ಬನ್ನಿಮಂಟಪದಿಂದ ಚಾಲನೆ ನೀಡಲಾಗುವುದು.
ಕಾರ್ಯಕ್ರಮಗಳು ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯಲಿದ್ದು, ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಈ ಬಾರಿ ದಸರಾ ಕಾರ್ಯಕ್ರಮಗಳು ಇತಿಹಾಸ, ಸಂಸ್ಕೃತಿಯೊಂದಿಗೆ ನಂಟು ಹೊಂದಿದ್ದು, ಎಲ್ಲಾ ವಯೋಮಿತಿಯ ಜನರು ಭಾಗವಹಿಸುವಂತೆ ರೂಪಿಸಿ ದಸರಾ ಕಾರ್ಯಕ್ರಮಗಳನ್ನು ಯಾವುದೇ ಲೋಪವಿಲ್ಲದಂತೆ ಅಚ್ಚುಕಟ್ಟಾಗಿ ಸಂಘಟಿಸಿ ಎಂದು ಹೇಳಿದರು.
ಮೆರವಣಿಗೆಗೆ ಚಾಲನೆ ನೀಡುವ ಕಿರಂಗೂರು ಬನ್ನಿಮಂಟಪದಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಕೈಗೊಂಡು ಸಿದ್ಧತೆಗಳನ್ನು ಪ್ರಾರಂಭಿಸಿ. ಯೋಗ ದಸರಾದಲ್ಲಿ ಯೋಗ ಪ್ರದರ್ಶನದೊಂದಿಗೆ ಯೋಗ ಸ್ಪರ್ಧೆಗಳನ್ನು ಸಹ ಆಯೋಜಿಸಿ. ಶಿಕ್ಷಣ ಇಲಾಖೆ ಅವರು ಯೋಗ ಸ್ಪರ್ಧೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುವಂತೆ ಶಾಲಾ ಕಾಲೇಜುಗಳಿಗೆ ಮಾಹಿತಿ ನೀಡಿ ಎಂದರು.