ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ನಂತೂರಿನ ತಾರೆತೋಟ ಬಳಿ ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಕಚೇರಿ ಎದುರು ರಾಷ್ಟ್ರೀಯ ಹೆದ್ದಾರಿ 169 ಭೂಮಾಲಕರ ಹೋರಾಟ ಸಮಿತಿ ನೇತೃತ್ವದಲ್ಲಿ ಆಗಸ್ಟ್ 30ರವರೆಗೆ ಪ್ರತಿಭಟನಾ ಧರಣಿ ನಡೆಯಲಿದೆ.
ಧರಣಿಯನ್ನುದ್ದೇಶಿಸಿ ಭೂ ಮಾಲಕರ ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್ ಮಾತನಾಡಿ, ಕುಲಶೇಖರಿಂದ ಕಾರ್ಕಳ (ಸಾಣೂರು)ವರೆಗಿನ ರಾ.ಹೆದ್ದಾರಿ 169ರ ಅಗಲೀಕರಣಕ್ಕಾಗಿ ಭೂಸ್ವಾಧೀನಗೊಂಡವರಿಗೆ ಸೂಕ್ತ ಪರಿಹಾರದ ಹಣ ಬ್ಯಾಂಕ್ ಖಾತೆಗೆ ಜಮಾ ಆಗುವವರೆಗೂ ಒಂದಿಂಚೂ ಜಾಗವನ್ನು ಬಿಡಲಾಗದು ಎಂದಿದ್ದಾರೆ.

2016ರಿಂದ ಭೂಮಿ ಸರಕಾರದ ಕೈಯಲ್ಲಿದೆ. 2020ರಿಂದ ಭೂ ಪರಿಹಾರ ನೀಡುವ ಪ್ರಕ್ರಿಯೆಗಳು ನಡೆಯುತ್ತಿದ್ದರೂ ಪರಿಹಾರ ಮಾತ್ರ ನೀಡಿಲ್ಲ. ಅಧಿಕಾರಿಗಳ ವಿಳಂಬ ನೀತಿಯಿಂದಾಗಿ 483 ಕೋಟಿ ರೂ.ಗಳಿದ್ದ ಪರಿಹಾರಧನ 1,113 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ರಸ್ತೆ ಕಾಮಗಾರಿ ನಡೆಯದೆ ಟ್ರಾಫಿಕ್ ಸಮಸ್ಯೆಯಿಂದ ಪ್ರತಿನಿತ್ಯ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂದರು.



                                    