ಮಂಗಳೂರು: ಮಂಗಳೂರು ನಗರದ ಹೊರವಲಯ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್‌ನಲ್ಲಿ, ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು. ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಾವಿರಾರು ಮಂದಿ ಜನರು ಈ ಸಮಾವೇಶದಲ್ಲಿ ಭಾಗವಹಿಸಿದರು.
ಉಡುಪಿ ಹಾಗೂ ದಕ್ಷಿಣ ಕನ್ನಡದ ಜಿಲ್ಲಾ ಖಾಝಿಗಳ ಮಾರ್ಗದರ್ಶನದಲ್ಲಿ ನಡೆದ ಈ ಸಮಾವೇಶದಲ್ಲಿ, ಮೊದಲ ಬಾರಿಗೆ ಉಲಮಾಗಳಿಂದ ಈ ಮಟ್ಟದ ನಿರ್ವಹಣೆ ನಡೆಯಿತು. ಸಮಾವೇಶದ ವೇಳೆ ಯಾವುದೇ ಸಂಘಟನೆಗಳ ಬಾವುಟಗಳು ಅಥವಾ ಘೋಷಣೆಗಳಿಗೆ ಅವಕಾಶ ನೀಡಲಾಗಲಿಲ್ಲ. ಮಾತ್ರ ಭಾರತದ ರಾಷ್ಟ್ರಧ್ವಜ ಹಿಡಿದ ವಾಹನಗಳಿಗೆ ಪ್ರವೇಶ ಕಲ್ಪಿಸಲಾಗಿತ್ತು.
ಸಮಾವೇಶ ಸ್ಥಳದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಕಾರ್ಯಕ್ರಮಕ್ಕೆ ಸುಮಾರು 2000ಕ್ಕೂ ಹೆಚ್ಚು ಸ್ವಯಂಸೇವಕರು ಕಾರ್ಯನಿರ್ವಹಿಸಿದರು. ಪಂಪ್‌ವೆಲ್ ಮತ್ತು ಬಿ.ಸಿ.ರೋಡ್‌ನಿಂದ ಬಸ್ಸುಗಳಲ್ಲಿ ಬರುವವರಿಗೆ ವಿಶೇಷ ವಾಹನ ವ್ಯವಸ್ಥೆ ಮಾಡಲಾಗಿತ್ತು. ವಿಶಾಲ ಪಾರ್ಕಿಂಗ್ ಹಾಗೂ ಎರಡು ಬಾರಿ ನಮಾಝ್‌ಗೆ ಅನುಕೂಲಕರ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.