Saturday, January 24, 2026
Google search engine

Homeರಾಜ್ಯ77ನೇ ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜು; 2,000 ಇ-ಪಾಸ್ ವ್ಯವಸ್ಥೆ- ಸೀಮಂತ್...

77ನೇ ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜು; 2,000 ಇ-ಪಾಸ್ ವ್ಯವಸ್ಥೆ- ಸೀಮಂತ್ ಕುಮಾರ್ ಸಿಂಗ್

ಬೆಂಗಳೂರು : 77ನೇ ಗಣರಾಜ್ಯೋತ್ಸವ ದಿನಾಚರಣೆಯ ರಾಜ್ಯಮಟ್ಟದ ಸಮಾರಂಭಕ್ಕೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿದೆ. ಗಣರಾಜ್ಯೋತ್ಸವ ದಿನಾಚರಣೆಯ ಸಂದರ್ಭ ಸಾರ್ವಜನಿಕರಿಗಾಗಿ ಆನ್‌ಲೈನ್ ಮೂಲಕ 2,000 ಇ-ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

77ನೇ ಗಣರಾಜ್ಯೋತ್ಸವ ಹಿನ್ನೆಲೆ ಜಿಬಿಎ ಕಮಿಷನರ್ ಮಹೇಶ್ವರ್ ರಾವ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರೇಡ್‌ನಲ್ಲಿ 516 ಜನ ಭಾಗಿಯಾಗಲಿದ್ದಾರೆ. ಭದ್ರತೆ ಸೇರಿ 2 ಸಾವಿರ ಪೊಲೀಸರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮಕ್ಕೆ ಬರುವವರು ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಬರಬೇಕು. ಬೆಳಗ್ಗೆ 8:58ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಈ ಬಾರಿ ತಮಿಳುನಾಡು ಪೊಲೀಸರು, ಆರ್ಮಿ, ಸಿಆರ್‌ಪಿಎಫ್ ಭಾಗಿಯಾಗಲಿದೆ ಎಂದರು.

8 ಗಂಟೆ ಒಳಗೆ ಎಲ್ಲಾ ಸಾರ್ವಜನಿಕರು ಬಂದು ಇರಬೇಕು. ಆ ನಂತರ ಬಂದರೆ ಪರಿಶೀಲನೆಗೆ ಕಷ್ಟ ಆಗಬಹುದು, ಹಾಗಾಗಿ ಬೇಗ ಬರೋದು ಕಡ್ಡಾಯ. 26ರಂದು ಬೆಳಗ್ಗೆ 8:30ರಿಂದ 10:30ರವರೆಗೆ ಕಬ್ಬನ್ ರಸ್ತೆಯಲ್ಲಿ, ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಸಂಚಾರ ಎರಡೂ ದಿಕ್ಕಲ್ಲೂ ನಿರ್ಬಂಧಿಸಲಾಗಿದೆ. ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ಸರ್ಕಲ್, ಶಿವಾಜಿನಗರ ಬಸ್ ನಿಲ್ದಾಣದವರೆಗೆ, ಕಬ್ಬನ್ ರೋಡ್, ಸಿಟಿಓ ಸರ್ಕಲ್‌ನಿಂದ ಕೆಆರ್ ರಸ್ತೆ, ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ, ಎಂಜಿ ರೋಡ್, ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಕ್ವೀನ್ಸ್ ಸರ್ಕಲ್‌ವರೆಗೆ ಪಾರ್ಕಿಂಗ್ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಗಣರಾಜ್ಯೋತ್ಸವ ಹಿನ್ನೆಲೆ ವೇದಿಕೆಯ ನಿರ್ಮಾಣ, ಬ್ಯಾರಿಕೇಡಿಂಗ್ ಮತ್ತು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರಿಂಧ ಧ್ವಜಾರೋಹಣ ನಡೆಯಲಿದೆ. ಧ್ವಜಾರೋಹಣದ ನಂತರ ರಾಜ್ಯಪಾಲರು ಗೌರವ ಸ್ವೀಕರಿಸಿ ನಂತರ ನಾಡಿನ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡುತ್ತಾರೆ. ಪಥಸಂಚಲನದಲ್ಲಿ ಆರ್ಮಿ, ಏರ್‌ಫೋರ್ಸ್, ಸಿಆರ್‌ಪಿಎಫ್ ಮಹಿಳಾ, ವಿಶೇಷವಾಗಿ ಹೊರ ರಾಜ್ಯದ ತಮಿಳುನಾಡು ರಾಜ್ಯ ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್‌ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳನ್ನೊಳಗೊಂಡಂತೆ ಕವಾಯತು ಮತ್ತು ಬ್ಯಾಂಡ್ ಒಟ್ಟು 37 ತುಕಡಿಗಳಲ್ಲಿ ಸುಮಾರು 1,100 ಮಂದಿ ಭಾಗವಹಿಸಲಿದ್ದಾರೆ. ಶಾಲಾ ಮಕ್ಕಳ ಒಟ್ಟು 2 ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 1,400 ಮಕ್ಕಳು ಭಾಗವಹಿಸಲಿದ್ದಾರೆ.

ಪೊಲೀಸ್ ಇಲಾಖಾ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೈದಾನದಲ್ಲಿ ಭದ್ರತೆ ಮತ್ತು ಸುರಕ್ಷತೆಗಾಗಿ 100 ಸಿಸಿ ಕ್ಯಾಮೆರಾ ವ್ಯವಸ್ಥೆ ಹಾಗೂ 4 ಬ್ಯಾಗೇಜ್ ಸ್ಕ್ಯಾನರ್ ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆಗಳನ್ನು ಮಾಡಲಾಗಿದೆ. ಸೇವಾಸಿಂಧು ವೆಬ್‌ಸೈಟ್ ಮೂಲಕ ಪಾಸ್ ಪಡೆಯಬಹುದು. ಕಾರ್ಯಕ್ರಮಕ್ಕೆ ಆಗಮಿಸುವವರು ಪ್ರವೇಶ ದ್ವಾರದಲ್ಲಿ ಆಹ್ವಾನ ಪತ್ರಿಕೆಯೊಂದಿಗೆ ಕಡ್ಡಾಯವಾಗಿ ಅರ್ಜಿ ಗುರುತಿನ ಚೀಟಿಯೊಂದಿಗೆ ಬರಬೇಕು ಎಂದು ವಿವರಿಸಿದರು.

RELATED ARTICLES
- Advertisment -
Google search engine

Most Popular