ಬೆಂಗಳೂರು : ರಾಜ್ಯ ರಾಜಕೀಯಕ್ಕೆ ಮತ್ತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮರಳಲಿದ್ದಾರಾ ಎನ್ನುವ ಗುಮಾನಿಯ ನಡುವೆ, ಕುಮಾರಸ್ವಾಮಿ ಅವರ ಕಾಂಗ್ರೆಸ್ ವಿರುದ್ದದ ವಾಗ್ದಾಳಿ ತೀವ್ರಗೊಳ್ಳುತ್ತಿದ್ದು, ಪ್ರಮುಖವಾಗಿ, ಡಿಕೆ ಶಿವಕುಮಾರ್ ಬ್ರದರ್ಸ್ ವಿರುದ್ದ ಟೀಕಾಪ್ರಹಾರವನ್ನು ನಡೆಸುತ್ತಿದ್ದಾರೆ.
ಕಾಂಗ್ರೆಸ್ ನಲ್ಲಿರುವ ಹಲವು ನಾಯಕರು ಲೀಸ್ ಮೇಲೆ ಜೆಡಿಎಸ್ ನಿಂದ ಹೋಗಿರುವುದು ಎನ್ನುವ ಕುಮಾರಸ್ವಾಮಿ ಹೇಳಿಕೆಗೆ, ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದು, ಸಾಂವಿಧಾನಿಕ ಹುದ್ದೆಯಲ್ಲಿರುವ ನಾಯಕರ ಬಗ್ಗೆ ಆ ರೀತಿಯ ಹೇಳಿಕೆ ಸರಿಯಲ್ಲ ಎಂದು ಕಿವಿಮಾತನ್ನು ಹೇಳಿದ್ದಾರೆ.
ಇನ್ನೂ ಜೆಡಿಎಸ್ ಪಕ್ಷದ ಅಸ್ತಿತ್ವದ ಬಗ್ಗೆ ಹೇಳಿಕೆ ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಮ್ಮ ಪಕ್ಷದ್ದು ಹಾಗಿರಲಿ. ಸೋಕಾಲ್ಡ್ ನ್ಯಾಷನಲ್ ಪಾರ್ಟಿ ಕಾಂಗ್ರೆಸ್ ಪಕ್ಷವು ಬಿಹಾರ, ಮಹಾರಾಷ್ಟ್ರದಲ್ಲಿ ಯಾವ ಲೆವೆಲ್ಲಿಗೆ ಬಂದಿದೆ ಎಂಬುದನ್ನು ಮೊದಲು ನೋಡಿಕೊಳ್ಳಿ ಎಂದು ತಿರುಗೇಟು ಕೊಟ್ಟಿದ್ದು, ಮುಂದುವರಿಯುತ್ತಾ, ಜೆಡಿಎಸ್ ಬಗ್ಗೆ ಚರ್ಚೆ ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಯಾರು? ಅವರ ಸರ್ಟಿಫಿಕೇಟ್ ನಮಗೆ ಬೇಕಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರುವ ಮಂತ್ರಿಗಳು ಎಷ್ಟು ಜನ ಜೆಡಿಎಸ್ ನಿಂದ ಲೀಸ್ ಮೇಲೆ ಹೋಗಿದ್ದಾರೆ ಎನ್ನುವುದನ್ನು ಮೊದಲು ಅವರಪ್ಪನನ್ನು ಕೇಳಿ ತಿಳಿದುಕೊಳ್ಳಲಿ. ಮುಖ್ಯಮಂತ್ರಿಗಳಿಂದ ಹಿಡಿದು ಎಷ್ಟು ಜನ ಮಂತ್ರಿಗಳು ಜೆಡಿಎಸ್ ಮೂಲದವರು? ಗೊತ್ತಿದೆಯಾ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಾ. ಮಹದೇವಪ್ಪ, ಹಿಂದೆ ದೇವೇಗೌಡರು ಸಿದ್ದರಾಮಯ್ಯನವರು ವಿಪಕ್ಷೀಯ ನಾಯಕರಿದ್ದರು ಎಂಬ ಕಾರಣಕ್ಕೆ ವಿರೋಧ ಪಕ್ಷ ನಾಯಕನ ಸ್ಥಾನವನ್ನು ಪುಟಕೋಸಿಗೆ ಹೋಲಿಸಿದ್ದರು. ಈಗ ಕುಮಾರಸ್ವಾಮಿ ಅವರು ಎರಡು ಬಾರಿ ಜನರೇ ಮೆಚ್ಚಿ, ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವ ಅದೇ ಸಿದ್ದರಾಮಯ್ಯ ಅವರನ್ನು ಲೀಸ್ ಸಿ.ಎಂ ಎಂದು ಲಘುವಾಗಿ ಮಾತನಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಮುಂದುವರೆದು ಮುಖ್ಯಮಂತ್ರಿ ಆಗಲೀ ವಿರೋಧ ಪಕ್ಷದ ನಾಯಕ ಸ್ಥಾನವಾಗಲಿ, ಅವುಗಳಿಗೆ ಸಂವಿಧಾನಿಕವಾದ ಘನತೆ ಇದೆ. ಇಂತಹ ಘನವಾದ ಸ್ಥಾನಗಳ ಬಗ್ಗೆ ನಮ್ಮ ರಾಜ್ಯ ಕಂಡ ಗೌರವಾನ್ವಿತ ಮಾಜಿ ಪ್ರಧಾನಿಗಳು ಮತ್ತು ಗೌರವಾನ್ವಿತ ಕೇಂದ್ರ ಸಚಿವರು ಲಘುವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಡಾ.ಎಚ್.ಸಿ.ಮಹದೇವಪ್ಪ, ಕುಮಾರಸ್ವಾಮಿಗೆ ಬುದ್ದಿಮಾತನ್ನು ಹೇಳಿದ್ದಾರೆ.
ಬಹುಮುಖ್ಯವಾಗಿ ಹಿಂದುಳಿದ ವರ್ಗದ ವ್ಯಕ್ತಿಗಳನ್ನು ಅವಮಾನಿಸುವ ಇವರ ಕ್ಷುಲ್ಲಕ್ಕ ಮತ್ತು ಅಸೂಯೆಯ ನಡೆಯನ್ನು ಇವರು ತಿದ್ದಿಕೊಂಡು, ಜನರ ಮನ್ನಣೆ ಪಡೆಯಲು ಅವರ ಪರವಾಗಿ ಹೋರಾಟ ನಡೆಸಬೇಕು ಎಂದು ಡಾ.ಹೆಚ್.ಸಿ.ಮಹದೇವಪ್ಪ, ಕೇಂದ್ರ ಸಚಿವ ಕುಮಾರಸ್ವಾಮಿಗೆ ಕಿವಿಮಾತನ್ನು ಹೇಳಿದ್ದಾರೆ.



