ಚಾಮರಾಜನಗರ : ಹನೂರು ತಾಲ್ಲೂಕಿನ ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ಮಾ.16ರಿಂದ 19ರವರೆಗೆ ವಿಜೃಂಭಣೆಯ ಯುಗಾದಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಮಾದಪ್ಪನ ಕ್ಷೇತ್ರ ಧಾರ್ಮಿಕ ಉತ್ಸವಕ್ಕೆ ಸಿಂಗಾರಗೊಂಡಿದೆ. ಇನ್ನೂ ಈಗಾಗಲೇ ಮಹದೇಶ್ವರನ ದರ್ಶನ ಪಡೆಯಲು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಕ್ಷೇತ್ರದತ್ತ ಮುಖಮಾಡಿದ್ದಾರೆ.
ಸುತ್ತಮುತ್ತಲಿನ ಜಿಲ್ಲೆಗಳಿಂದ ಹರಕೆ ಹೊತ್ತ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಕ್ಷೇತ್ರ ಪ್ರವೇಶಿಸುತ್ತಿದ್ದಾರೆ. ನಾಲ್ಕು ದಿನಗಳ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಾ.16ರಂದು ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. 17ರಂದು ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ, 18ರಂದು ಅಮಾವಾಸ್ಯೆ ವಿಶೇಷ ಪೂಜೆ, 19ರಂದು ಚಂದ್ರಮಾನ ಯುಗಾದಿಯ ಪ್ರಯುಕ್ತ ಅದ್ಧೂರಿಯಾಗಿ ಮಹಾ ರಥೋತ್ಸವ ಜರುಗಲಿದೆ.
ವೈಭವದ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಕ್ಷೇತ್ರಕ್ಕೆ ಭಕ್ತರು ಬಂದಿದ್ದು ದೇಗುಲದ ಪ್ರಾಂಗಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡಾರ ಹೂಡಿದ್ದಾರೆ. ಇಡೀ ಕ್ಷೇತ್ರ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡಿದ್ದು, ಕಣ್ಮನ ಸೆಳೆಯುತ್ತಿದೆ. ಪಾದಯಾತ್ರಿಗಳು ಸಾಗುವ ಮಾರ್ಗದಲ್ಲಿ ಕುಡಿಯುವ ನೀರು ಹಾಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಉರುಳು ಸೇವೆ ಮಾಡುವ ಮಾರ್ಗದಲ್ಲಿ ನಿರಂತರವಾಗಿ ನೀರು ಸಿಂಪರಣೆ ನಡೆಯುತ್ತಿದೆ.
ಇನ್ನೂ ಈ ಬಾರಿ ಬೇಸಗೆಯ ದಗೆ ಹೆಚ್ಚಾಗಿರುವುದರಿಂದ ಕ್ಷೇತ್ರದಲ್ಲಿ ಅಲಲ್ಲಿ ಶಾಮಿಯಾನ ಹಾಕುವ ಮೂಲಕ ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದ್ದು, ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ, ಭಕ್ತರಿಗೆ ನಿರಂತರ ಅನ್ನದಾಸೋಹ ನಡೆಯುತ್ತಿದೆ, ಕ್ಷೇತ್ರಕ್ಕೆ ತೆರಳಲು ತಮಿಳುನಾಡು ಹಾಗೂ ಕರ್ನಾಟಕದ ಹಲವು ಭಾಗಗಳಿಂದ ಹೆಚ್ಚುವರಿ ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯ, ಸ್ನಾನದ ಗೃಹಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ದಾಸೋಹ ಭವನದಲ್ಲಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸಲು ಲಕ್ಷಕ್ಕೂ ಹೆಚ್ಚಿನ ಲಾಡುಗಳನ್ನು ತಯಾರಿಸಲಾಗುತ್ತಿದೆ. ಅನ್ನಪ್ರಸಾದ ಹಾಗೂ ಲಾಡು ತಯಾರಿಸಲು ಸಿಲಿಂಡರ್ ಕೊರತೆಯಾಗಿಲ್ಲ; ದಾಸೋಹ ನಿರಾತಂಕವಾಗಿ ಸಾಗಿದೆ ಎಂದು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ತಿಳಿಸಿದ್ದಾರೆ.



