Sunday, July 20, 2025
Google search engine

Homeರಾಜ್ಯಸುದ್ದಿಜಾಲರೋಟರಿಯೊಂದಿಗೆ ಸೇವೆ ನಿರಂತರವಾಗಿರಲಿ: ನಾಗಾರ್ಜುನ

ರೋಟರಿಯೊಂದಿಗೆ ಸೇವೆ ನಿರಂತರವಾಗಿರಲಿ: ನಾಗಾರ್ಜುನ

ಯಳಂದೂರು: ರೋಟರಿ ಇಡೀ ಜಗತ್ತಿನಲ್ಲಿ ಶಿಸ್ತಿನ ಸೇವೆಗೆ ಹೆಸರುವಾಸಿಯಾಗಿದ್ದು ಇಲ್ಲಿರುವವರು ಸೇವೆಯಲ್ಲಿ ನಿರಂತರವಾಗಿರಬೇಕು ಎಂದು ರೋಟರಿ ಸಂಸ್ಥೆಯ ಪೂರ್ವ ಜಿಲ್ಲಾ ಗವರ್ನರ್ ಡಾ.ಆರ್.ಎಸ್. ನಾಗಾರ್ಜುನ ಕರೆ ನೀಡಿದರು.

ಅವರು ಶನಿವಾರ ಪಟ್ಟಣದ ಶ್ರೀ ಶಂಕರ ಸಭಾ ಭವನದಲ್ಲಿ ರೋಟರಿ ಗ್ರೀನ್‌ವೇ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ವೈ.ಜಿ. ನಿರಂಜನಸ್ವಾಮಿ ಅಧ್ಯಕ್ಷತೆಯ ನೂತನ ತಂಡದ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ರೋಟರಿ ಸಂಸ್ಥೆಯಲ್ಲಿ ಕೆಲಸ ಮಾಡುವರಿಗೆ ಮೊದಲು ಅವರ ವೃತ್ತಿಗೆ ನಂತರ ಅವರ ಸಂಸಾರಕ್ಕೆ ಇದಾದ ಬಳಿಕ ಸಮಾಜ ಸೇವೆಗೆ ತೊಡಗಿಕೊಳ್ಳುವಂತೆ ಆದ್ಯತೆ ನೀಡಲಾಗುತ್ತದೆ. ಇಡೀ ವಿಶ್ವದಲ್ಲಿ ಕಳೆದ ೧೨೫ ವರ್ಷಗಳಿಂದ ನಮ್ಮ ಸಂಸ್ಥೆ ಕರ್ತವ್ಯ ನಿರ್ವಹಿಸುತ್ತಿದೆ. ೨೦೦ ಕ್ಕೂ ಹೆಚ್ಚು ದೇಶಗಳಲ್ಲಿ ೧೨ ಲಕ್ಷಕ್ಕೂ ಅಧಿಕ ಜನರು ನಮ್ಮ ಸಂಸ್ಥೆ ಸದಸ್ಯರಾಗಿದ್ದಾರೆ. ಇಡೀ ವಿಶ್ವದಲ್ಲೇ ಪೊಲೀಯೋ ನಿರ್ಮೂಲನೆಗೆ ನಮ್ಮ ಸಂಸ್ಥೆ ಮೊದಲು ಪಣ ತೊಟ್ಟಿತ್ತು. ಪ್ರತಿ ವರ್ಷ ಇದಕ್ಕಾಗಿ ೪೫೦ ಮಿಲಿಯನ್ ಡಾಲರ್ ಹಣ ಖರ್ಚು ಮಾಡುತ್ತದೆ. ನಮ್ಮ ಸೇವೆಯನ್ನು ನೋಡಿ ಬಿಲ್‌ಗೇಟ್ಸ್ ಸಂಸ್ಥೆಯ ವತಿಯಿಂದ ಇದಕ್ಕೆ ಖರ್ಚಾಗುವ ೨ ಪಟ್ಟು ಹಣ ನಮಗೆ ನೀಡುತ್ತಿದೆ. ಇದು ಪ್ರಾಮಾಣಿಕ ಸೇವೆಗೆ ಸಂದ ಗೌರವವಾಗಿದೆ.

ಇಡೀ ವಿಶ್ವದಲ್ಲಿ ಪೊಲೀಯೋ ನಿರ್ಮೂಲನೆ ಕಾಲ ಸನ್ನಿಹಿತವಾಗಿದ್ದು ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದಲ್ಲಿ ಪೊಲೀಯೋ ಇನ್ನೂ ಇದು ಇದನ್ನು ಕೂಡ ಕಿತ್ತೊಗೆಯುವ ಕಾಲ ಹತ್ತಿರವಾಗಿದೆ. ಇದೊಂದು ಮೈಲಿಗಲ್ಲಾಗಿದ್ದು ನಾವು ದೃಢ ನಿಶ್ಚಯ ಮಾಡಿಕೊಂಡರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇಂತಹ ಮನಸ್ಥಿತಿಯನ್ನು ಇಟ್ಟುಕೊಂಡೇ ನಾವು ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.


ನೂತನ ಅಧ್ಯಕ್ಷ ವೈ.ಜಿ. ನಿರಂಜನಸ್ವಾಮಿ ಮಾತನಾಡಿ, ನಮ್ಮ ಸಂಸ್ಥೆಯು ಈ ಹಿಂದಿನ ಅಧ್ಯಕ್ಷರು ಪದಾಧಿಕಾರಿಗಳ ನೇತೃತ್ವದಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ನಾವು ಶ್ರಮ ಮೀರಿ ಕೆಲಸವನ್ನು ಮಾಡುತ್ತೇವೆ. ಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ಸಮಾಜಸೇವೆ ಮಾಡುವ ಮನಸ್ಥಿತಿ ಎಲ್ಲರಲ್ಲೂ ಇದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ, ಸಮಾಜಪರ,ಕೆಲಸಗಳನ್ನು ಮಾಡಲು ಶ್ರಮಪಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಹಾಯಕ ಗವರ್ನರ್ ಎಸ್. ಬಸವರಾಜು, ವಲಯ ಪ್ರತಿನಿಧಿ ಕೆಂಪೇಗೌಡ ಮಾಜಿ ಅಧ್ಯಕ್ಷ ವೈ.ಎನ್. ಪ್ರಕಾಶ್ ಮಾತನಾಡಿದರು. ಕಾರ್ಯದರ್ಶಿ ಸಿ. ಪುಟ್ಟರಾಜು ಖಜಾಂಚಿ, ಎಸ್. ರವಿ, ಸದಸ್ಯರಾದ ಎನ್. ಶಿವಕುಮಾರ್, ವೈ.ಎನ್. ಬಂಗಾರು, ಎಂ.ಎಸ್. ರಿತೇಶ್, ವೈ.ಬಿ. ನಟರಾಜು, ವೈ.ಕೆ.ಮೋಳೆ ನಾಗರಾಜು, ಅನಿಲ್‌ಕುಮಾರ್, ಎಂ. ನಟರಾಜು, ವೈ.ಡಿ. ಸೂರ್ಯನಾರಾಯಣ, ಬಿ.ಟಿ. ಶ್ರೀನಿವಾಸ, ಡಾ.ವಿ.ಜಿ.ಸಾಗರ್,ಎನ್. ರುದ್ರಯ್ಯ, ಶಿವಮೂರ್ತಿ ಮುಡಿಗುಂಡ, ಎಂ. ದೇವರಾಜು ಸೇರಿದಂತೆ ಅನೇಕರು ಇದ್ದರು.

RELATED ARTICLES
- Advertisment -
Google search engine

Most Popular