ಮೈಸೂರು: ನಗರದ ಹಲವೆಡೆ ಫುಟ್‌ಪಾತ್‌ಗಳು ಒತ್ತುವರಿಯಾಗಿರುವ ಹಿನ್ನೆಲೆಯಲ್ಲಿ ಮೇಯರ್ ಶಿವಕುಮಾರ್ ನಗರ ಪ್ರದರ್ಶನ ನಡೆಸಿ ಸಯ್ಯಾಜಿರಾವ್ ರಸ್ತೆ ಹಾಗೂ ಅರಮನೆ ಸುತ್ತಲೂ ಫುಟ್‌ಪಾತ್ ತೆರವುಗೊಳಿಸುವಂತೆ ಸೂಚಿಸಿದರು.
ನಗರದ ಬಹುತೇಕ ಕಡೆಗಳಲ್ಲಿ ಫುಟ್‌ಪಾತ್ ಒತ್ತುವರಿಯಾಗಿ ಪಾದಚಾರಿಗಳು ನಡೆದಾಡಲೂ ಸಹ ಜಾಗವಿಲ್ಲದೆ ಪರದಾಡುವ ಸ್ಥಿತಿ ಇರುವುದರಿಂದ ಮೇಯರ್ ಶಿವಕುಮಾರ್ ಸೋಮವಾರ ನಗರದ ಹಲವೆಡೆ ಫುಟ್‌ಪಾತ್ ಒತ್ತುವರಿಯಾಗಿರುವ ಬಗ್ಗೆ ಪರಿಶೀಲಿಸಿದರು. ಮೊದಲಿಗೆ ಸಯ್ಯಾಜಿರಾವ್ ರಸ್ತೆಯಲ್ಲಿ ಪರಿಶೀಲನೆ ಮಾಡಿ, ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಧಕ್ಕೆಯಾಗುತ್ತಿದೆ. ಈ ಕಾರಣಕ್ಕೆ ರಸ್ತೆಯ ಒಂದು ಭಾಗದಲ್ಲಿ ಫುಟ್‌ಪಾತ್ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಅರಮನೆ ಸುತ್ತಲೂ ಪರಿಶೀಲ ನಡೆಸಿ ಪ್ರವೇಶ ದ್ವಾರ ಸೇರಿದಂತೆ ಹಲವೆಡೆ ಫುಟ್ ಪಾತ್ ಅತಿಕ್ರಮಣವಾಗಿರುವುದನ್ನು ಮನಗಂಡು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ಮೇಯರ್ ಶಿವಕಯಮಾರ್, ಕಳೆದ ಕೌನ್ಸಿಲ್ ಸಭೆಯಲ್ಲಿ ನಗರದ ಹೃದಯ ಭಾಗದಲ್ಲಿಯೇ ಹಲವೆಡೆ ಫುಟ್‌ಪಾತ್ ಒತ್ತುವರಿಯಾಗಿರುವುದನ್ನು ತೆರವುಗೊಳಿಸುವ ಬಗ್ಗೆ ಚರ್ಚಿಸಲಾಗಿತ್ತು ಅದರಂತೆ ಪರಿಶೀಲನೆ ನಡೆಸಿ ತೆರವಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ, ಆರೋಗ್ಯಾಧಿಕಾರಿ ನಾಗರಾಜು, ಪಾಲಿಕೆ ಸದಸ್ಯರು ಹಾಜರಿದ್ದರು.