ಬೆಂಗಳೂರು : ಅಧಿಕಾರ ಹಸ್ತಾಂತರ ವಿಚಾರದಲ್ಲಿ ಹೈಕಮಾಂಡ್ ನಾಯಕರಿಂದ ಸಂದೇಶದ ನಿರೀಕ್ಷೆಯಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರು, ಒತ್ತಡ ಪ್ರಯತ್ನವನ್ನು ತೀವ್ರಗೊಳಿಸಲು ವಿಧಾನಮಂಡಲ ಅಧಿವೇಶನ ಮುನ್ನಾದಿನ ಬುಧವಾರ ಮಹತ್ವದ ಸಭೆ ನಡೆಸಲು ತಯಾರಿ ನಡೆಸುತ್ತಿದ್ದು, ಸುಮಾರು 40 ರಿಂದ 45 ಶಾಸಕರನ್ನು ಒಟ್ಟಿಗೆ ಸೇರಿಸಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದ್ದು, ರಾಜ್ಯದ ಎಲ್ಲಾ ಭಾಗಗಳ ಕಿರಿಯ ಶಾಸಕರೇ ಈ ಪಟ್ಟಿಯಲ್ಲಿ ಹೆಚ್ಚಿದ್ದಾರೆ.
ಡಿಸಿಎಂ ತವರು ಜಿಲ್ಲೆಯ ಶಾಸಕರು ಮುಂದಾಳತ್ವ ವಹಿಸಿ ಈ ಸಭೆಯನ್ನು ಸಂಘಟಿಸಿದ್ದಾರೆ. ಸಭೆಗೆ ಆಹ್ವಾನಿಸಿರುವ ಶಾಸಕರ ಪಟ್ಟಿಯಲ್ಲಿ ಡಿಸಿಎಂ ಬೆಂಬಲಿಗರಾಗಿ ಸ್ಪಷ್ಟವಾಗಿ ಗುರುತಿಸಿಕೊಳ್ಳದ 10 ಕ್ಕೂ ಹೆಚ್ಚು ಶಾಸಕರೂ ಇದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಕುರ್ಚಿಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಹಕ್ಕೊತ್ತಾಯವನ್ನು ಒಪ್ಪುವ ಅಥವಾ ನಿರಾಕರಿಸುವ ಎರಡನ್ನೂ ಮಾಡದೆ ವರಿಷ್ಠರು ವಿಳಂಬ ಮಾಡುತ್ತಿರುವ ಹಿನ್ನೆಲೆ ಒತ್ತಡ ತಂತ್ರದ ಭಾಗವಾಗಿ ಈ ಸಭೆಯನ್ನು ಸಂಘಟಿಸಲಾಗಿದೆ. ಅಧಿವೇಶನ ಸಂದರ್ಭದಲ್ಲಿ ನಡೆಯುತ್ತಿರುವ ಸಿಎಂ ಕುರ್ಚಿ ಕಿತ್ತಾಟಕ್ಕೆ ಹೊಸ ತಿರುವು ನೀಡುತ್ತಾ ಎಂಬ ಕುತೂಹಲಕ್ಕೆ ಕಾರಣವಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಮೂರು ದಿನ ದಿಲ್ಲಿಯಲ್ಲಿ ವಾಸ್ತವ್ಯ ಮಾಡಿ ತಮ್ಮ ಹಕ್ಕೊತ್ತಾಯದ ವಿಚಾರದಲ್ಲಿ ವರಿಷ್ಠರ ಸ್ಪಷ್ಟ ತೀರ್ಮಾನಕ್ಕೆ ಪ್ರಯತ್ನ ನಡೆಸಿದ್ದರು. ಆದರೆ, ಡಿಸಿಎಂ ಅವರ ಅವಕಾಶದ ಸರದಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆಯಾದರೂ, ಯಾವಾಗ ಎಂಬ ಸ್ಪಷ್ಟತೆಯನ್ನು ಹೈಕಮಾಂಡ್ ನೀಡಿಲ್ಲ. ಹಾಗಾಗಿ, ಪಕ್ಷದ ಸರಕಾರದಲ್ಲಿನ ಗೊಂದಲ ಕೊನೆಗೊಳಿಸಲು ವರಿಷ್ಠರು ಆದಷ್ಟು ಬೇಗ ತೀರ್ಮಾನ ಪ್ರಕಟಿಸಬೇಕು ಎಂಬ ಹಕ್ಕೊತ್ತಾಯದ ಸಂದೇಶ ನೀಡಲು ಈ ಸಭೆಯನ್ನು ಏರ್ಪಾಟು ಮಾಡಲಾಗಿದೆ ಎನ್ನಲಾಗಿದೆ.



