ಮೈಸೂರು: ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ಇದ್ದರೆ ತಮಿಳುನಾಡಿನ ತಮ್ಮ ಮೈತ್ರಿ ಪಕ್ಷವನ್ನ ಮೇಕೆದಾಟು ಯೋಜನೆಗೆ ಒಪ್ಪಿಸಲಿ. ನಾನು ಐದೇ ನಿಮಿಷದಲ್ಲಿ ಪ್ರಧಾನಿ ಮಂತ್ರಿಗಳ ಒಪ್ಪಿಗೆ ಕೊಡಿಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸವಾಲು ಹಾಕಿದರು.
ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ, ನನ್ನ ಹಳೆಯ ಮಾತಿಗೆ ನಾನು ಈಗಲೂ ಬದ್ದ. ಕಾಂಗ್ರೆಸ್ ನವರಿಗೆ ತಮಿಳುನಾಡು ಸರ್ಕಾರವನ್ನ ಒಪ್ಪಿಸುವ ಶಕ್ತಿ ಇಲ್ಲ. ಅವರನ್ನ ಧಿಕ್ಕರಿಸುವ ಶಕ್ತಿಯೂ ಇಲ್ಲ. ತಮಿಳುನಾಡು ಸರ್ಕಾರ ಧಿಕ್ಕರಿಸಿ ಮೇಕೆದಾಟು ಯೋಜನೆ ಮಾಡಿದರೆ ಆಗುತ್ತದೆ. ಇಲ್ಲದಿದ್ದರೆ ಮೇಕೆದಾಟು ಯೋಜನೆ ಕಾಂಗ್ರೆಸ್ ಕೈಯಲ್ಲಿ ಸಾಧ್ಯವಿಲ್ಲ. ತಮಿಳುನಾಡು ಸರ್ಕಾರ ಒಪ್ಪಿಸದೆ ಮೇಕೆದಾಟು ಯೋಜನೆ ಕಚೇರಿ ತೆರೆದರೆ ಏನು ಪ್ರಯೋಜನ? ಮೇಕೆದಾಟು ಮಾಡುತ್ತೇವೆ ಎಂದು ಹೇಳಿದವರು ಕಾಂಗ್ರೆಸ್ ನವರು, ನಾನಲ್ಲ. ಯೋಜನೆ ಮಾಡ್ತೇವೆ ಎಂದು ಹೇಳಿದವರು ಮಾಡಬೇಕು ತಾನೇ. ಎರಡೂವರೆ ವರ್ಷದಿಂದ ಸುಮ್ಮನೆ ಸಮಯ ಹಾಳು ಮಾಡುತ್ತಿದ್ದಾರೆ ಅಷ್ಟೇ. ಸುಮ್ಮನೆ ನನ್ನ ಮೇಲೆ ಜವಾಬ್ದಾರಿ ಹೊರಿಸಿದರೆ ನಾನು ಹೇಗೆ ಮಾಡಲು ಸಾಧ್ಯ.? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಗೆ ನನ್ನನ್ನ ಕಂಡರೆ ಭಯ. ನನ್ನೊಬ್ಬನ ಮೇಲೆ ಕಾಂಗ್ರೆಸ್ ಗೆ ಅತಿಯಾದ ಭಯ ಇದೆ. ಹೀಗಾಗಿ ಪದೇ ಪದೇ ಕಾಂಗ್ರೆಸ್ ಮುಖಂಡರು ನನ್ನ ಹೆಸರನ್ನ ಜಪಿಸುತ್ತಾರೆ. ಬಿಜೆಪಿ- ಜೆಡಿಎಸ್ ಜೊತೆಯಾದ ಮೇಲಂತು ಕಾಂಗ್ರೆಸ್ ಗೆ ನಿದ್ದೆ ಬರುತ್ತಿಲ್ಲ. ಹೀಗಾಗಿ ನನ್ನ ಮೇಲೆ ಪದೇ ಪದೇ ಟಾರ್ಗೆಟ್ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.
ಮುಂದಿನದು ನಮ್ಮದೇ ಸರ್ಕಾರ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಮುಂದಿನದ್ದಲ್ಲ ಇನ್ನು ಇಪ್ಪತ್ತು ವರ್ಷವೂ ನಿಮ್ಮದೇ ಇರಲಿ. ಮೊದಲು ಹೇಳಿದ ಕೆಲಸ ಮಾಡಿ. ಇಪ್ಪತ್ತು ವರ್ಷ ನಮ್ಮದೇ ಸರ್ಕಾರ ಎಂದವರು ಏನೇನಾದ್ರು ಎಂಬುದು ನಮಗೆ ಗೊತ್ತಿದೆ. ಯಾರದ್ದು ಸರ್ಕಾರ ಎಂಬುದು ಜನ ತೀರ್ಮಾನ ಮಾಡ್ತಾರೆ. ಕಾಂಗ್ರೆಸ್ ನಲ್ಲಿ ಸಿಎಂ ಖುರ್ಚಿಗಾಗಿ ಗಲಾಟೆಗಳೇ ನಡೆಯುತ್ತಿದೆ. ಗಲಾಟೆಯಲ್ಲಿ ಮುಳುಗಿರುವ ಕಾಂಗ್ರೆಸನ್ನು ಜನ ಹೇಗೆ ಒಪ್ಪುತ್ತಾರೆ. ಜನ ಎಲ್ಲದನ್ನು ಗಮನಿಸುತ್ತಿದ್ದಾರೆ ಎಂದರು.
ಹೆಚ್.ಡಿಕೆಗೆ ಕಾಂಗ್ರೆಸ್ ಪ್ರತಿಭಟನೆ ಬಿಸಿ
ಮೈಸೂರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಪ್ರತಿಭಟನೆ ಬಿಸಿ ತಟ್ಟಿತು. ಇಂದು ಮೈಸೂರಿನಲ್ಲಿ ಕುಮಾರಸ್ವಾಮಿ ದಿಶಾ ಸಭೆ ನಡೆಸಲು ಆಗಮಿಸುವ ವೇಳೆ ನಗರದ ಜಿ.ಪಂ ಕಚೇರಿ ಬಳಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.
ಹೊಸದಾಗಿ ಕೈಗಾರಿಕಾ ಯೋಜನೆಗೆ ತರದ, ಮೇಕೆದಾಟು ಯೋಜನೆಗೆ ಕೇಂದ್ರ ಅನುಮತಿ ಕೊಡಿಸದ, ಮಂಡ್ಯ ಜನರಿಗೆ ಸುಳ್ಳು ಆಶ್ವಾಸನೆ ಕೊಟ್ಟು ಗೆದ್ದಿರುವ ಕುಮಾರಸ್ವಾಮಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹೆಚ್.ಡಿಕೆ ದಿಶಾ ಸಭೆ: ಹಲವರು ಭಾಗಿ
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯತಿ ಮುಖ್ಯ ಸಭಾಂಗಣದಲ್ಲಿ ದಿಶಾ ಸಭೆ ನಡೆಯಿತು. ಜಿಲ್ಲಾ ಅಭಿವೃದ್ದಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಗೆ ಕಾಂಗ್ರೆಸ್ ಶಾಸಕರು ಗೈರಾಗಿದ್ದಾರೆ. ಮೈಸೂರಿನಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡೆಸಿದ ದಿಶಾ ಸಭೆಗೆ ಜೆಡಿಎಸ್ ಹಿರಿಯ ಶಾಸಕ ಜಿ ಟಿ ದೇವೇಗೌಡ ಕೂಡ ಗೈರಾಗಿದ್ದರು.
ಸಭೆಯಲ್ಲಿ ಸಂಸದ ಯದುವೀರ್, ಬಿಜೆಪಿ ಶಾಸಕ ಶ್ರೀವತ್ಸ, ಜೆಡಿಎಸ್ ಶಾಸಕ ಜಿ.ಡಿ ಹರಿಶ್ ಗೌಡ, ಮಾಜಿ ಶಾಸಕ ಅಶ್ವಿನ್ ಕುಮಾರ್ ಸೇರಿದಂತೆ ಡಿ.ಸಿ ಲಕ್ಷ್ಮಿಕಾಂತ ರೆಡ್ಡಿ, ಜಿ.ಪಂ ಸಿಇಒ ಯುಕೇಶ್, ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್, ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಡಿಸಿಪಿ ಸುಂದರರಾಜ್ ಸೇರಿದಂತೆ ಅಧಿಕಾರಿ ವರ್ಗ ಭಾಗಿಯಾಗಿದ್ದರು.