ಬೆಂಗಳೂರು: ಬೆಂಗಳೂರು- ತುಮಕೂರು ನಡುವೆ ಮೆಟ್ರೋ ರೈಲ್ವೇ ಯೋಜನೆ ನಿರ್ಮಾಣವಾದರೆ ಕೈಗಾರಿಕೆಗಳಿಗೆ ಅನುಕೂಲವಾಗುವುದರ ಜತೆಗೆ ಬೆಂಗಳೂರಿನ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ತುಮಕೂರಿನಲ್ಲಿ ಬೃಹತ್ ಕೈಗಾರಿಕಾ ವಸಾಹತು ನಿರ್ಮಾಣವಾಗಿದ್ದು ಎರಡೂ ನಗರಗಳ ನಡುವೆ ಪ್ರತಿದಿನ ಲಕ್ಷಾಂತರ ಮಂದಿ ಸಂಚರಿಸುತ್ತಿದ್ದಾರೆ. ಆದ್ದರಿಂದ ಮೆಟ್ರೋ ಅನಿವಾರ್ಯ ಎನ್ನುವುದನ್ನು ಮನಗಾಣಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು- ತುಮಕೂರು ನಡುವೆ ಮೆಟ್ರೋ ಯೋಜನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಡಿಪಿಎಆರ್ ಗೆ ಸಿದ್ದತೆಗಳು ನಡೆಯುತ್ತಿವೆ. ಹೆದ್ದಾರಿ ಪಕ್ಕದಲ್ಲೇ ಮೆಟ್ರೋ ಬೇಕೇ? ಅಥವಾ ಪರ್ಯಾಯಾ ಮಾರ್ಗ ಆಯ್ಕೆ ಮಾಡಿಕೊಳ್ಳಬೇಕೇ? ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು ವೆಚ್ಚದ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದರು.
ಬೆಂಗಳೂರಿನ ಇಬ್ಬರು ಸಂಸದರು ಬೆಂಗಳೂರು- ತುಮಕೂರು ಮೆಟ್ರೋಗೆ ವಿರೋಧ ವ್ಯಕ್ತಪಡಿಸಿ ಮೂರ್ಖತನದ ಯೋಜನೆ ಎಂದಿದ್ದಾರೆ. ಬಹುಶಃ ಅವರು ಸರಿಯಾಗಿ ಅರ್ಥ ಮಾಡಿಕೊಂಡಂತಿಲ್ಲ. ಲಂಡನ್, ನ್ಯೂಯಾರ್ಕ್, ಟೋಕಿಯೊ ಸೇರಿದಂತೆ ದೊಡ್ಡ ದೊಡ್ಡ ನಗರಗಳಿಂದ ದೂರದ ನಗರಗಳಿಗೆ ಮೆಟ್ರೋ ಸಂಪರ್ಕ ಇದೆ. ಇದನ್ನು ಅರ್ಥ ಮಾಡಿಕೊಂಡು ಬೆಂಗಳೂರಿನ ಸಂಸದರು ಸಹಕರಿಸಬೇಕು ಎಂದರು.
ಬೆಂಗಳೂರಿನವರಾದರೂ ಕೇಂದ್ರ ಸಚಿವ ವಿ.ಸೋಮಣ್ಣ ತುಮಕೂರಿನ ಸಂಸದರಾಗಿದ್ದಾರೆ. ಅವರಿಗೂ ಮೆಟ್ರೋ ಬೇಕು ಎನ್ನುವುದು ಅರ್ಥವಾಗಿದೆ. ತುಮಕೂರಿಗೆ ಮೆಟ್ರೋ ಬೇಕೇಬೇಕು. ಇದರಿಂದ ಕೈಗಾರಿಕೆಗಳು ಮತ್ತು ಲಕ್ಷಾಂತರ ಜನರಿಗೆ ಸಹಾಯವಾಗಲಿದೆಯೇ ಹೊರತು ಯಾವುದೇ ರಿಯಲ್ ಎಸ್ಟೇಟ್ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಎರಡನೇ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಿಡದಿ ಅಥವಾ ನೆಲಮಂಗಲದಲ್ಲಿ ಸ್ಥಳ ಅಂತಿಮಗೊಳ್ಳಬಹುದು. ದಾಬಸ್ ಪೇಟೆ-ದೇವನಹಳ್ಳಿ ನಡುವೆ 5 ಸಾವಿರ ಎಕರೆಯಲ್ಲಿ ಕ್ಲೀನ್ ಸಿಟಿ ನಿರ್ಮಿಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಗೆ ಮೆಟ್ರೋ ಯೋಜನೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಬೇಕು ಎಂದು ಸಚಿವ ಪರಮೇಶ್ವರ್ ಹೇಳಿದರು.