ಮಂಡ್ಯ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಸದ್ಯಕ್ಕೆ ನಿಲ್ಲುವುದಿಲ್ಲ, ಸಿಲಿಂಡರ್ ಸಿಗುವುದಿಲ್ಲ ಎಂಬ ವದಂತಿಯಲ್ಲಿ ನೂರಾರು ಗ್ರಾಹಕರು ಗ್ಯಾಸ್ ಏಜೆನ್ಸಿಗೆ ಮುಗಿಬಿದ್ದ ಪರಿಣಾಮ ತಳ್ಳಾಟ, ನೂಕಾಟ ಉಂಟಾಗಿ ಪೊಲೀಸ್ ಠಾಣೆಯ ಮುಂದೆ ಲಾರಿ ನಿಲ್ಲಿಸಿ ಸಿಲಿಂಡರ್ ವಿತರಿಸಿದ ಘಟನೆ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.
ಕೆ.ಆರ್.ಪೇಟೆ ಪಟ್ಟಣದ ಮಂಜುನಾಥ ಗ್ಯಾಸ್ ಏಜೆನ್ಸಿಯವರು ಎಂದಿನಂತೆ ಗೋಡನ್ ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ನೂರಾರು ಗ್ರಾಹಕರು ಸಿಲಿಂಡರ್‌ಗಾಗಿ ಮುಗಿಬಿದ್ದಿದ್ದು, ಈ ವೇಳೆ ಜನರನ್ನು ನಿಯಂತ್ರಿಸಲು ಏಜೆನ್ಸಿ ಸಿಬ್ಬಂದಿಗಳು ಪರದಾಡುವಂತಾಗಿದ್ದು, ತಳ್ಳಾಟ, ನೂಕಾಟ ಹೆಚ್ಚಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಮಾಲೀಕರು ಅಂತಿಮವಾಗಿ ಕೆ.ಆರ್.ಪೇಟೆ ಪೊಲೀಸ್ ಠಾಣೆ ಆವರಣಕ್ಕೆ ಸಿಲಿಂಡರ್‌ಗಳನ್ನು ತುಂಬಿದ್ದ ಲಾರಿಯನ್ನು ಕೊಂಡೊಯ್ದರು. ಅಲ್ಲಿಗೂ ಕೂಡ ಜಮಾಯಿಸಿದ ಗ್ರಾಹಕರು ತಾ ಮುಂದು ನಾ ಮುಂದು ಎಂಬಂತೆ ಸಿಲಿಂಡರ್‌ಗೆ ಮುಗಿಬಿದ್ದಿದ್ದಾರೆ.
ಬಳಿಕ ಪೊಲೀಸರ ಸಮ್ಮುಖದಲ್ಲಿ ಸರತಿ ಸಾಲಿನಲ್ಲಿ ಗ್ರಾಹಕರನ್ನು ನಿಲ್ಲಿಸಿ ಸಿಲಿಂಡರ್ ವಿತರಿಸಲಾಯಿತು.
ಸಾಕಷ್ಟು ದಾಸ್ತಾನಿದೆ, ಭಯ ಪಡುವ ಅಗತ್ಯವಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಏಜೆನ್ಸಿ ಮಾಲೀಕರು ಎಷ್ಟೇ ಹೇಳಿದರೂ ಸಹ ಜನರು ಆತಂಕದಲ್ಲಿ ಸಿಲಿಂಡರ್‌ಗಾಗಿ ಏಜೆನ್ಸಿ ಮುಂದೆ ಸಾಲುಗಟ್ಟಿ ನಿಂತಿದ್ದರು.
ಇದು ಕೇವಲ ಕೆ.ಆರ್.ಪೇಟೆಯಲ್ಲಷ್ಟೇ ಅಲ್ಲ, ರಾಜ್ಯದ ಬಹುತೇಕ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ಗ್ಯಾಸ್ ಏಜೆನ್ಸಿಗಳ ಮುಂದೆ ಜನಜಾತ್ರೆಯೇ ಸೇರುತ್ತಿದೆ. ಜನರನ್ನು ನಿಯಂತ್ರಿಸಲು ಅನಿಲ ವಿತರಕರು ಸಾಹಸ ಪಡುತ್ತಿದ್ದಾರೆ.



