ನವದೆಹಲಿ : ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 1 ರನ್ನಿಂದ ಸೋಲೊಪ್ಪಿಕೊಂಡಿದೆ. ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯವು ಡೇವಿಡ್ ಮಿಲ್ಲರ್ ಮಾಡಿದ ಒಂದು ಸಣ್ಣ ನಿರ್ಧಾರದಿಂದಾಗಿ ಡೆಲ್ಲಿ ಕೈಜಾರಿದೆ.
ಗುಜರಾತ್ ಭರ್ಜರಿ ಬ್ಯಾಟಿಂಗ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್, ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. ತಂಡದ ಪರ ಶುಭಮನ್ ಗಿಲ್ (70), ವಾಷಿಂಗ್ಟನ್ ಸುಂದರ್ (55) ಮತ್ತು ಜೋಸ್ ಬಟ್ಲರ್ (52) ಅರ್ಧಶತಕ ಸಿಡಿಸಿ ಮಿಂಚಿದರು.
ಕೆ.ಎಲ್. ರಾಹುಲ್ ಹೋರಾಟ ವ್ಯರ್ಥ
ಬೃಹತ್ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ಕೆ.ಎಲ್. ರಾಹುಲ್ 92 ರನ್ ಗಳಿಸಿ ಜಯದ ಆಸೆ ಚಿಗುರಿಸಿದ್ದರು. ಆದರೆ ಅವರು ಔಟ್ ಆದ ನಂತರ ಪಂದ್ಯದ ಜವಾಬ್ದಾರಿ ಡೇವಿಡ್ ಮಿಲ್ಲರ್ ಹೆಗಲ ಮೇಲೆ ಬಿದ್ದಿತು. ಗಾಯದ ನಡುವೆಯೂ ಕ್ರೀಸ್ಗೆ ಬಂದ ಮಿಲ್ಲರ್ 41 ರನ್ ಗಳಿಸಿ ಅಜೇಯರಾಗುಳಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಮಿಲ್ಲರ್ ಒಂದು ದೊಡ್ಡ ತಪ್ಪು ಮಾಡಿದರು. ರನ್ ತೆಗೆದುಕೊಳ್ಳುವ ಅವಕಾಶವಿದ್ದರೂ ಅವರು ಸಿಂಗಲ್ ನಿರಾಕರಿಸಿದರು. ತಾವೇ ಫಿನಿಶ್ ಮಾಡುವ ಭರವಸೆಯಲ್ಲಿದ್ದ ಮಿಲ್ಲರ್ ಅವರ ಈ ನಿರ್ಧಾರವೇ ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು.
ಮಿಲ್ಲರ್ ಹೊಡೆದ ಚೆಂಡನ್ನು ಹಿಡಿದ ಜೋಸ್ ಬಟ್ಲರ್ ನೇರ ಹಿಟ್ ಮಾಡುವ ಮೂಲಕ ಕುಲದೀಪ್ ಯಾದವ್ ಅವರನ್ನು ರನ್ ಔಟ್ ಮಾಡಿದರು.
ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ, ಕೇವಲ 1 ರನ್ ಅಂತರದ ಸೋಲು ಅನುಭವಿಸಿತು.
ಒಂದು ವೇಳೆ 5ನೇ ಎಸೆತದಲ್ಲಿ ಮಿಲ್ಲರ್ ಸಿಂಗಲ್ ತೆಗೆದುಕೊಂಡಿದ್ದರೆ ಸ್ಕೋರ್ ಸಮವಾಗುತ್ತಿತ್ತು. ಪಂದ್ಯ ಕನಿಷ್ಠ ಪಕ್ಷ ‘ಸೂಪರ್ ಓವರ್’ ವರೆಗಾದರೂ ಹೋಗುತ್ತಿತ್ತು.
ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಈ ಸೀಸನ್ ನಲ್ಲಿ ತನ್ನ ಮೊದಲ ಗೆಲುವಿನ ಖಾತೆ ತೆರೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, ಗುಜರಾತ್ 6ನೇ ಸ್ಥಾನಕ್ಕೇರಿದೆ.



