Thursday, December 11, 2025
Google search engine

Homeಸ್ಥಳೀಯಸಚಿವ ಕೆ.ವೆಂಕಟೇಶ್ ಹಾಗೂ ಅವರ ಪುತ್ರ ನಿತಿನ್ ವೆಂಕಟೇಶ್ ಸಹಕಾರ ಸಂಘಗಳಲ್ಲಿ ದ್ವೇಷ ರಾಜಕಾರಣ ಮಾಡುತ್ತಿರುವುದು...

ಸಚಿವ ಕೆ.ವೆಂಕಟೇಶ್ ಹಾಗೂ ಅವರ ಪುತ್ರ ನಿತಿನ್ ವೆಂಕಟೇಶ್ ಸಹಕಾರ ಸಂಘಗಳಲ್ಲಿ ದ್ವೇಷ ರಾಜಕಾರಣ ಮಾಡುತ್ತಿರುವುದು ಖಂಡನೀಯ : ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ ಪ್ರಸನ್ನ

ವರದಿ: ಸತೀಶ್ ಆರಾಧ್ಯ

ಪಿರಿಯಾಪಟ್ಟಣ: ಸಚಿವರಾದ ಕೆ.ವೆಂಕಟೇಶ್ ಹಾಗೂ ಅವರ ಪುತ್ರ ನಿತಿನ್ ವೆಂಕಟೇಶ್ ಸಹಕಾರ ಸಂಘಗಳಲ್ಲಿ ದ್ವೇಷ ರಾಜಕಾರಣ ಮಾಡುತ್ತಿರುವುದು ಖಂಡನೀಯ ಎಂದು ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ ಪ್ರಸನ್ನ ಆರೋಪಿಸಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಜೆಡಿಎಸ್ ಬೆಂಬಲಿಗರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಚಿವರಾದ ಕೆ.ವೆಂಕಟೇಶ್ ಹಾಗೂ ಅವರ ಪುತ್ರ ನಿತಿನ್ ವೆಂಕಟೇಶ್ ಪಿರಿಯಾಪಟ್ಟಣ ತಾಲೂಕಿನಲ್ಲಿ ಜೆಡಿಎಸ್ ಬೆಂಬಲಿತರು ಅಧಿಕಾರದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ನೇರ ಹಸ್ತಕ್ಷೇಪ ಮಾಡಿ ಸಹಕಾರಿ ಕ್ಷೇತ್ರದ ಕಚೇರಿಯನ್ನು ಪಕ್ಷದ ಕಚೇರಿಯಂತೆ ಮಾಡಿಕೊಂಡು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸಹಕಾರಿ ಸದಸ್ಯರನ್ನು ಎತ್ತಿ ಕಟ್ಟಿ ಗೊಂದಲ ಉಂಟುಮಾಡುವ ಮೂಲಕ ತಮ್ಮ ರಾಜಕೀಯ ಅಧಿಕಾರ ಬಳಸಿ ಹಲವು ಸಹಕಾರ ಸಂಘಗಳನ್ನು ವಜಾ ಮಾಡಿರುವುದು ಖಂಡನೀಯ.

ಕೆಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಚಿಕ್ಕನೇರಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಗರು ಹೆಚ್ಚು ಆಯ್ಕೆಯಾಗಿರುವುದನ್ನು ಸಹಿಸದ ಸಚಿವರು ವಾಮ ಮಾರ್ಗದ ಮೂಲಕ ಅಧಿಕಾರಿಗಳಿಂದ ಹಲವು ಆರೋಪಗಳನ್ನು ಮಾಡಿಸಿ ಸಂಘವನ್ನು ವಜಗೊಳಿಸಿದ್ದಾರೆ.

ಪಿರಿಯಾಪಟ್ಟಣದ ಟಿಎಪಿಸಿಎಂಎಸ್ ( TAPCMS ) ಹಾಗೂ ನಂದಿನಾಥಪುರ ಮತ್ತು ಚಪ್ಪರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆ ನಡೆಸದೆ ಆಡಳಿತ ಅಧಿಕಾರಿ ನೇಮಿಸಿದ್ದಾರೆ. 50 ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧಿಕಾರವಧಿ ಮೀರಿದ್ದರು ಚುನಾವಣೆ ನಡೆಸದೆ ಆಡಳಿತ ಅಧಿಕಾರಿಗಳನ್ನು ನೇಮಿಸಿದ್ದಾರೆ, ತಾಲೂಕಿನಲ್ಲಿ ನೂತನವಾಗಿ 7 ಸಹಕಾರ ಸಂಘಗಳನ್ನು ರಾಜಕೀಯ ದುರುದ್ದೇಶದಿಂದ ಸ್ಥಾಪಿಸುವ ಮೂಲಕ ಜೆಡಿಎಸ್ ಬೆಂಬಲಿತ ರೈತರಿಗೆ ಉದ್ದೇಶಪೂರ್ವಕವಾಗಿ ಸಾಲ ನೀಡದೆ ಸತಾಯಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದರು.

ಈ ಹಿಂದೆ ಮಾಜಿ ಶಾಸಕರಾದ ಕೆ.ಮಹದೇವ್ ಅವರು ದರಕಾಸ್ತು ಕಮಿಟಿಯಲ್ಲಿ ಸಾಗುವಳಿ ನೀಡಿರುವ ರೈತರಿಗೆ ಖಾತೆ ಮಾಡಲು ತೊಂದರೆ ನೀಡುತ್ತಿದ್ದಾರೆ ಮತ್ತು ಕೆ.ಮಹದೇವ್ ಅವರ ಅಧಿಕಾರವಧಿಯಲ್ಲಿ ಗ್ರಾಮ ಪಂಚಾಯತಿಗಳಲ್ಲಿ ವಸತಿ ಮಂಜೂರು ಮಾಡಿದ್ದ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದೇ ತೊಂದರೆ ನೀಡುತ್ತಿದ್ದಾರೆ, ಸಚಿವರು ಸುಧೀರ್ಘ ರಾಜಕಾರಣ ಅನುಭವ ಹೊಂದಿದ್ದಾರೆ ಅವರ ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸಹಕಾರ ಇದ್ದೇ ಇದೆ ಆದರೆ ದ್ವೇಷದ ರಾಜಕಾರಣ ಮಾಡಲು ಹೊರಟರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಚಿಟ್ಟೆನಹಳ್ಳಿ ಪಿಎಸಿಸಿಎಸ್( PACCS ) ಅಧ್ಯಕ್ಷ ಸಿ.ಎನ್ ರವಿ, ಟಿಎಪಿಸಿಎಂಎಸ್ (TAPCMS ) ಮಾಜಿ ಅಧ್ಯಕ್ಷ ಐಲಾಪುರ ರಾಮು, ಕಂಪಲಾಪುರ ಪಿಎಸಿಸಿಎಸ್( PACCS ) ಮಾಜಿ ಅಧ್ಯಕ್ಷ ಕೆ.ಕುಮಾರ್, ಹುಣಸವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಲೋಕೇಶ್, ಮುಖಂಡರಾದ ಎ.ಟಿ ರಂಗಸ್ವಾಮಿ, ಶಿವಣ್ಣ, ರಘುನಾಥ್, ಮೋಹನ್, ಕುಮಾರ್, ನಾಗೇಂದ್ರ ಮತ್ತಿತರಿದ್ದರು.

RELATED ARTICLES
- Advertisment -
Google search engine

Most Popular