ನಂಜನಗೂಡು: ನಗರದ ಆರ್. ಪಿ. ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಆರ್.ಓ.ಬಿ. (ರೋಡ್ ಓವರ್ ಬ್ರಿಡ್ಜ್) ಮೇಲ್ಸೇತುವೆ ಕಾಮಗಾರಿಗೆ ಹೊಸ ವೇಗ ಸಿಕ್ಕಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕೇಂದ್ರ ರೈಲ್ವೆ ಸಚಿವರಾದ ವಿ. ಸೋಮಣ್ಣ ಅವರು ಇಂದು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳದ ಪರಿಶೀಲನೆಯ ಸಂದರ್ಭದಲ್ಲಿ ಶಾಸಕ ದರ್ಶನ ಧೃವನಾರಾಯಣ್ ಅವರ ನೇತೃತ್ವದಲ್ಲಿ ಸಚಿವರಿಗೆ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳ ವಿವರ, ಪ್ರಗತಿಯ ಸ್ಥಿತಿ ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಹಾಗೂ ಸಂಚಾರದಲ್ಲಿ ಅಡಚಣೆ ಉಂಟಾಗದಂತೆ ಕಾಮಗಾರಿ ವೇಗವಾಗಿ ಪೂರ್ಣಗೊಳ್ಳಬೇಕೆಂದು ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈ ಮೇಲ್ಸೇತುವೆ ಯೋಜನೆಯು ನಂಜನಗೂಡು ನಗರದ ದೀರ್ಘಕಾಲದ ಬೇಡಿಕೆಯಾಗಿದ್ದು, ಇದರ ನಿರ್ಮಾಣದಿಂದ ನಗರ ಸಂಚಾರ ವ್ಯವಸ್ಥೆ ಸುಗಮವಾಗುವ ಜೊತೆಗೆ ಸ್ಥಳೀಯ ಜನತೆಗೆ ಬಹುಪಾಲು ಅನುಕೂಲಗಳು ಲಭ್ಯವಾಗಲಿವೆ. ರೈಲು ಹಳಿಗಳ ಅಡ್ಡ ಹಾದು ಹೋಗುವ ರಸ್ತೆಯಲ್ಲಿ ಪದೇಪದೆ ಸಂಭವಿಸುತ್ತಿದ್ದ ತಡೆಗಳು ಮತ್ತು ಸಂಚಾರ ದಟ್ಟಣೆ ನಿವಾರಣೆಯಾಗಲಿದೆ.
ರೈಲ್ವೆ ಸಚಿವ ವಿ. ಸೋಮಣ್ಣ ಅವರು ಕಾಮಗಾರಿ ಸ್ಥಳವನ್ನು ನಿಗದಿಯಾಗಿ ಪರಿಶೀಲಿಸಿ, ಇಂಜಿನಿಯರ್‌ಗಳು ಮತ್ತು ಯೋಜನಾ ನಿರ್ವಹಣಾ ಅಧಿಕಾರಿಗಳಿಂದ ವಿವರಗಳನ್ನು ಪಡೆದರು. ಅವರು ಮಾತನಾಡುತ್ತಾ, “ಈ ಮೇಲ್ಸೇತುವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳುವುದು ನಮ್ಮ ಪ್ರಾಮುಖ್ಯತೆ. ಜನಸಾಮಾನ್ಯರ ಅನುಕೂಲಕ್ಕಾಗಿ ಎಲ್ಲ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ದರ್ಶನ ಧುವನಾರಾಯಣ್ , ಸಂಸದ ಸುನಿಲ್ ಬೋಸ್ ರವರು, ಶಾಸಕ ಶ್ರೀವತ್ಸ ರವರು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ರವರು, ಬಾಲರಾಜ್ ರವರು, ಪ್ರತಾಪ್ ಸಿಂಹ ರವರು, ಹರ್ಷವರ್ಧನ್ ರವರು, ನಗರಸಭಾ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ ರವರು, ತಹಸೀಲ್ದಾರ್ ಶಿವಕುಮಾರ್ ಕಾಸನೂರ್ ರವರು ಸೇರಿದಂತೆ ಹಲವು ಅಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.
