ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಆರೇಳು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿಕಾಸ ಗ್ರಾಮ ಯೋಜನೆಗೆ ಹೊಸದಾಗಿ ಅನುಷ್ಠಾನ ಮಾಡಿಸಿ ಹಣ ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಬಡಕನಕೊಪ್ಪಲು ಗ್ರಾಮದಲ್ಲಿ ಒಂದು ಕೋಟಿ ರೂಗಳ ವೆಚ್ಚದ ಸಿಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮಕ್ಕೆ ಈ ಹಿಂದೆ ವಿಕಾಸ ಗ್ರಾಮ ಯೋಜನೆಗೆ ೭೫ ಲಕ್ಷ ವೆಚ್ಚದ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಆದರೆ ಅನುಮೋದನೆಯಾಗದೆ ನೆನೆಗುದಿಗೆ ಬಿದ್ದಿದ್ದರಿಂದ ನಮ್ಮ ಸರ್ಕಾರ ಬಂದ ಮೇಲೆ ಯೋಜನೆಗೆ ಅನುದಾನ ಕೊಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಮಗಾರಿಗೆ ಚಾಲನೆ ನೀಡುತ್ತೇನೆ ಎಂದರು.
ರಾಜ್ಯ ಹೆದ್ದಾರಿ ಸೇರಿದಂತೆ ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುದಾನ ಒದಗಿಸಿದ್ದಾರೆ. ಮಳೆ ನಿಂತ ಮೇಲೆ ರಾಜ್ಯದ ಎಲ್ಲಾ ರಸ್ತೆಗಳಿಗೂ ಗುಂಡಿ ಮುಚ್ಚುವ ಕಾರ್ಯ ನಡೆಯಲಿದೆ ಎಂದ ಶಾಸಕರು ಗ್ರಾಮವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗುವುದು. ಉತ್ತಮ ಗುಣಮಟ್ಟದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರಲ್ಲದೆ ಗ್ರಾಮಸ್ಥರು ಜವಾಬ್ದಾರಿಯುತವಾಗಿ ರಸ್ತೆ ಕೆಲಸ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕುಗಳಿಗೆ ಹೆಚ್ಚುವರಿ ಬಸ್ಸುಗಳನ್ನು ನೀಡುವಂತೆ ಈಗಾಗಲೇ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಮನವಿ ಮಾಡಲಾಗಿದ್ದು, ಕೆ.ಆರ್.ನಗರ ಘಟಕಕ್ಕೆ ೨೫ ಅಶ್ವಮೇಧ ಬಸ್ಸುಗಳನ್ನು ನೀಡಲು ಒಪ್ಪಿಗೆ ಸೂಚಿಸಿದ್ದು, ದಸರಾ ವೇಳೆಯಲ್ಲಿ ಬರಲಿವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಶಾಸಕ ಡಿ.ರವಿಶಂಕರ್ ಅವರನ್ನು ಅಭಿನಂದಿಸಿದರು.
ಗ್ರಾ.ಪಂ. ಅಧ್ಯಕ್ಷೆ ವಿದ್ಯಾನಾರಾಯಣ್, ಉಪಾಧ್ಯಕ್ಷ ಬಿ.ಎನ್.ರೇವಣ್ಣ, ಹಂಪಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಪಿ.ಪ್ರಶಾಂತ್‌ಜೈನ್, ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಬಿ.ಎಂ.ಮಲ್ಲಿಕಾರ್ಜುನ್, ನಿರ್ದೇಶಕ ಡಿ.ಆರ್.ರಾಹುಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಕಾಂಗ್ರೆಸ್ ವಕ್ತಾರ ಸೈಯದ್‌ಜಾಬೀರ್, ಟಿಎಪಿಎಂಎಸ್‌ನ ಮಾಜಿ ನಿರ್ದೇಶಕ ಡಿ.ಸಿ.ರವಿ, ಅಡಗೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಮಹದೇವ, ಸದಸ್ಯರಾದ ಮೀನಾನಾಗರಾಜ್, ರಮ್ಯಾಮಂಜುನಾಥ್, ಹರಿರಾಜು, ಕಾಂಗ್ರೆಸ್ ಮುಖಂಡರಾದ ನಾರಾಯಣಶೆಟ್ಟಿ, ಎಂ.ಎಸ್.ಅನoತು, ಜಿ.ಎಂ.ಲೋಹಿತ್, ಅರ್ಜುನಹಳ್ಳಿ ಗ್ರಾ.ಪಂ. ಅಧ್ಯಕ್ಷ ಮಹದೇವಪ್ಪ, ಸದಸ್ಯ ಸಿ.ವಿ.ಗುಡಿ ದಿಲೀಪ್, ತಹಸೀಲ್ದಾರ್ ಜೆ.ಸುರೇಂದ್ರಮೂರ್ತಿ, ತಾಪಂ. ಇಒ ವಿ.ಪಿ.ಕುಲದೀಪ್, ಜಿ.ಪಂ. ಎಇಇ ಎಲ್.ವಿನೀತ್, ಜೆಇ ರವಿಕುಮಾರ್, ಉಪತಹಸೀಲ್ದಾರ್‌ನ ಕೃಷ್ಣಮೂರ್ತಿ, ಚೆಸ್ಕಾಂ ಎಇಇ ಅರ್ಕೇಶ್‌ಮೂರ್ತಿ, ಜೆಇ ಚಂದ್ರಶೇಖರ್, ಪಿಡಿಓ ಅಶ್ವಿನಿ, ರಾಜಸ್ವ ನಿರೀಕ್ಷಕ ಪ್ರಕಾಶ್, ಗ್ರಾಮ ಆಡಳಿತಾಧಿಕಾರಿ ಮಹಮ್ಮದ್‌ಅಜರ್ ಲಕ್ಷ್ಮೀಪೂಜಾರಿ, ನವೀನ್ ಹಾಜರಿದ್ದರು.