ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೂತನವಾಗಿ ಆರಂಭವಾಗಿರುವ ʼರಾಜ್ಯಧರ್ಮʼ ಸುದ್ದಿವಾಹಿನಿ ಮತ್ತು ʼಮೈಸೂರು ವಿಜಯʼ ದಿನಪತ್ರಿಕೆ ಕಛೇರಿಗೆ ಶುಕ್ರವಾರ ಶಾಸಕ ಜಿ.ಟಿ.ದೇವೇಗೌಡ ಮತ್ತು ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಭೇಟಿ ನೀಡಿ ಶುಭ ಹಾರೈಸಿದರು.
ಚಾಮುಂಡಿಪುರಂ ಸರ್ಕಲ್ ಬಳಿ ಇರುವ ಆರ್. ಆರ್ .ಕಾಂಪ್ಲೆಕ್ಸ್ ನಲ್ಲಿ ʼರಾಜ್ಯಧರ್ಮ ಸುದ್ದಿವಾಹಿನಿ ಮತ್ತು ಮೈಸೂರು ವಿಜಯ ದಿನಪತ್ರಿಕೆ ಕಛೇರಿʼಗೆ ಅಧಿಕೃತ ಚಾಲನೆ ದೊರಕಿದ್ದು, ನೂತನ ಕಛೇರಿಗೆ ಭೇಟಿ ನೀಡಿದ ಶಾಸಕ ಜಿ.ಟಿ.ದೇವೇಗೌಡ ಅವರು ಶುಭ ಹಾರೈಸಿ ʼಇವತ್ತಿನ ದಿನಗಳಲ್ಲಿ ಮಾಧ್ಯಮಗಳು ಒಳ್ಳೆಯ ಸುದ್ದಿಗಳನ್ನು ನೀಡದೆ ಅನಗತ್ಯವಾಗಿರುವ ಸುದ್ದಿಗಳನ್ನು ನೀಡುತ್ತಿದೆ. ಆದರೆ ಈ ಸಂಸ್ಥೆ ಸಮಾಜಕ್ಕೆ ಅಗತ್ಯವಾದ ಸುದ್ದಿಗಳನ್ನು ನೀಡಿ ಎತ್ತರಕ್ಕೆ ಬೆಳೆಯಲಿ. ಸಂಸ್ಥೆಯ ಸಂಸ್ಥಾಪಕರಾದ ಕಿರಣ್ ಕುಮಾರ್ ಸಿ.ಎಂ ಅವರಿಗೆ ಒಳ್ಳೆಯದಾಗಲಿ. ಸಂಸ್ಥೆ ಯಶಸ್ವಿಯಾಗಿ ಬೆಳೆಯಲಿʼ ಎಂದು ಶುಭ ಹಾರೈಸಿದರು.
ಸಾ.ರಾ.ಮಹೇಶ್ ಅವರು ಶುಭಹಾರೈಸಿ ʼಕಿರಣ್ ಚನ್ನಸಂದ್ರ ಅವರ ನೇತೃತ್ವದಲ್ಲಿ ರಾಜ್ಯಧರ್ಮವಾಹಿನಿ, ಮೈಸೂರು ವಿಜಯ ದಿನಪತ್ರಿಕೆ ಮೂಡಿ ಬರುತ್ತಿದೆ. ವಿದ್ಯುನ್ಮಾನ ಮಾಧ್ಯಮ, ಮುದ್ರಣ ಮಾಧ್ಯಮ ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ಕಷ್ಟ, ಆದರೆ ಕಿರಣ್ ಕುಮಾರ್ ಅವರು ಈ ಸಾಹಸ ಮಾಡುತ್ತಿದ್ದಾರೆ. ಅವರಿಗೆ ಮತ್ತವರ ತಂಡಕ್ಕೆ ಶುಭವಾಗಲಿʼ ಎಂದು ಹಾರೈಸಿದರು.
ರಾಜ್ಯಧರ್ಮ ಸುದ್ದಿವಾಹಿನಿ ಮತ್ತು ಮೈಸೂರು ವಿಜಯ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಡಾ.ವಿನಯ್ ನಾರಾಯಣ್ ಪಂಡಿತ್, ರಾಜ್ಯಧರ್ಮ ಸುದ್ದಿವಾಹಿನಿ ಮತ್ತು ಮೈಸೂರು ವಿಜಯ ದಿನಪತ್ರಿಕೆಯ ಪ್ರಧಾನ ಸಂಪಾದಕ ಕಿರಣ್ ಕುಮಾರ್ ಸಿ.ಎಂ, ಮೈಸೂರು ವಿಜಯ ದಿನಪತ್ರಿಕೆಯ ಸಂಪಾದಕಿ ಶ್ರೀಮತಿ ಶಿಲ್ಪಶ್ರೀ ಕೆ.ಎನ್, ರಾಜ್ಯಧರ್ಮ ಸಂಪಾದಕ ಹರ್ಷ ಸಿ.ಬಿ. ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.