ಮೈಸೂರು: ಮುಡಾದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಇಬ್ಬರು ಆಯುಕ್ತರನ್ನು ಸರ್ಕಾರ ವಜಾಗೊಳಿಸಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ.
ಮುಡಾ ೫೦-೫೦ ನಿಯಮದಲ್ಲಿ ಪಡೆದ ಸೈಟ್‌ಗಳು ಪರಭಾರೆ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ೨೦೨೦ರಿಂದ ೨೦೨೪ರವರೆಗಿನ ಎಲ್ಲ ೫೦:೫೦ ಸೈಟ್ ರದ್ದು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ೫೦:೫೦ರ ಅನುಪಾತದ ಸೈಟ್‌ಗಳು ಪರಭಾರೆ ಆಗಬಾರದು ಎಂದು ಒತ್ತಾಯಿಸಿದ್ದೇನೆ. ಹೀಗಾಗಿ ಈ ವಿಷಯದ ಕುರಿತು ತಾಂತ್ರಿಕ ಸಮಿತಿ ವರದಿ ಜಾರಿಗೊಳಿಸಿ, ಈ ಹಿಂದೆ ಮುಡಾ ಆಯುಕ್ತರಾಗಿದ್ದ ನಟೇಶ್ ಹಾಗೂ ದಿನೇಶ್ ಕುಮಾರ್ ಅವರ ವಜಾಗೆ ಆಗ್ರಹಿಸಿದ್ದೇನೆ. ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ ಕೂಡ ತನಿಖೆ ನಡೆಯುತ್ತಿದೆ, ಮಾರಾಟಕ್ಕೆ ಅವಕಾಶ ಕೊಡಲ್ಲ ಎಂದಿದ್ದಾರೆ ಎಂದು ಹೇಳಿದರು.
ನಮ್ಮ ಪ್ರಕಾರ ೫೦-೫೦ ನಿಯಮದಲ್ಲಿ ೧೪೦೦೦ಕ್ಕೂ ಹೆಚ್ಚು ನಿವೇಶನ ನೀಡಲಾಗಿದ್ದು, ಎಲ್ಲ ಸೈಟ್‌ಗಳನ್ನು ವಾಪಸ್ ಪಡೆಯಬೇಕಿದೆ. ಅಲ್ಲದೇ ಈ ಸಂಬಂಧ ತನಿಖೆ ಮುಗಿಸಿ ಅರ್ಹರಿಗೆ ಸೈಟ್‌ಗಳನ್ನು ನೀಡಬೇಕಿದೆ. ಕೇವಲ ೫೦:೫೦ ಅನುಪಾತ ಮಾತ್ರವಲ್ಲದೇ ಬದಲಿ ನಿವೇಶದ ಹಂಚಿಕೆಯಲ್ಲೂ ಮುಡಾದಲ್ಲಿ ಅಕ್ರಮ ನಡೆದಿದೆ. ಈ ವಿಷಯದಲ್ಲಿ ಅನಗತ್ಯವಾಗಿ ಎಲ್ಲರ ಹೆಸರುಗಳು ಹರಿದಾಡುತ್ತಿದ್ದು, ಬೇರೆ ರಾಜಕಾರಣಿಗಳ ಹೆಸರು ಬರುತ್ತಿದೆ. ಆದ್ದರಿಂದ ಈ ಸಂಬಂಧ ಮೊದಲು ತನಿಖೆ ನಡೆಸಿ, ತಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ. ಆ ನಂತರದಲ್ಲಿ ಎಲ್ಲ ೪,೫೦೦ ಸೈಟ್‌ಗಳ ಬಗ್ಗೆಯೂ ನಮ್ಮ ಹೋರಾಟ ನಡೆಯಲಿದ್ದು, ಮೊದಲು ೫೦:೫೦ ಅನುಪಾತವನ್ನು ರದ್ದು ಮಾಡಿದರೆ, ನಂತರ ಅವರ ಪ್ರತಿಕ್ರಿಯೆ ಏನೆಂದು ಗೊತ್ತಾಗಲಿದೆ ಎಂದರು.