ಮೈಸೂರು : ನಗರದ ಶಿವಾಜಿ ರಸ್ತೆಯಲ್ಲಿರುವ ಕುರುಬರ ಶ್ರೀ ಬೀರೇಶ್ವರ ಶ್ರೀ ರಾಮಮಂದಿರ ಟ್ರಸ್ಟ್‌ಗೆ ಸೇರಿದ ಸಮುದಾಯ ಭವನದ ಕಾಮಗಾರಿಯನ್ನು ಶಾಸಕ ತನ್ವೀರ್ ಸೇಠ್ ಅವರು ಬುಧವಾರ ವೀಕ್ಷಿಸಿದರು.
ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಈ ದೇವಾಲಯ ಅತ್ಯಂತ ಹಳೆಯ ದೇವಾಲಯವಾಗಿದೆ. ಆರ್ಥಿಕ ಸೌಲಭ್ಯ ಇರಲಿಲ್ಲ, ನಮ್ಮ ತಂದೆ ಅಜೀಜ್ ಸೇಠ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಮೂರು ಮಳಿಗೆಗಳನ್ನು ಕಟ್ಟಿಸಲು ಅನುದಾನ ನೀಡುವ ಮೂಲಕ ದೇವಾಲಯದ ಪೂಜಾ ಕಾರ್ಯಗಳಿಗೆ ಅನುವು ಮಾಡಿಕೊಟ್ಟಿದ್ದರು. ನಂತರ ನಾನು ಶಾಸಕನಾದ ಮೇಲೆ ಮತ್ತೆ ನಾಲ್ಕು ಮಳಿಗೆ ಕಟ್ಟಿಸಲು ಅನುದಾನ ನೀಡಿದ್ದೆ, ನಂತರ ದೇವಾಲಯದ ಅಭಿವೃದ್ಧಿಗೆ ೩ ಕೋಟಿ ರೂ ಅನುದಾನ ಕೋರಲಾಗಿತ್ತು, ಆದರೇ, ಸರ್ಕಾರದಿಂದ ೩೦ ಲಕ್ಷ ಮಾತ್ರ ಮಂಜೂರಾಗಿತ್ತು, ದಾನಿಗಳ ನೆರವಿನಿಂದ ಕಾಮಗಾರಿ ಮುಂದುವರಿಸಿದ್ದು, ಇದೀಗ ರಾಜ್ಯ ಸರ್ಕಾರ ೨ ಕೋಟಿ ರೂ. ಅನುದಾನ ನೀಡಿದ್ದು, ಕಾಮಗಾರಿ ಮುಂದುವರಿದಿದ್ದು ಅತ್ಯಂತ ಸಂತೋಷದ ವಿಷಯ, ಈ ನಿಟ್ಟಿನಲ್ಲಿ ಟ್ರಸ್ಟ್ ಅಧ್ಯಕ್ಷರಾದ ಎಂ.ಎನ್.ಮಹದೇವು ಅವರ ಪ್ರಾಮಾಣಿಕ ಸೇವೆ ಶ್ಲಾಘನೀಯ ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷರಾದ ಎಂ.ಎನ್.ಮಹದೇವು ಮಾತನಾಡಿ, ಕುರುಬರ ಶ್ರೀ ಬೀರೇಶ್ವರ ಶ್ರೀ ರಾಮಮಂದಿರದ ಅಭಿವೃದ್ಧಿ ಮತ್ತು ಸಮುದಾಯ ಭವನದ ನಿರ್ಮಾಣಕ್ಕೆ ಶಾಸಕ ತನ್ವೀರ್ ಸೇಠ್ ಮತ್ತು ಅವರ ತಂದೆ ದಿವಂತಹ ಅಜೀಜ್ ಸೇಠ್ ಅವರ ಸೇವೆ ಶ್ಲಾಘನಿಯವಾಗಿಗೆ. ನಮ್ಮ ದೇವಾಲಯದ ಅಭಿವೃದ್ಧಿಗೆ ಅನುದಾನ ಕೋರಿ ಸಲ್ಲಿಸಿದ್ದ ಫೈಲ್‌ಗಳನ್ನು ಶಾಸಕ ತನ್ವೀರ್ ಸೇಠ್ ಮತ್ತು ಅವರ ತಂದೆ ಅಜೀಜ್ ಸೇಠ್ ಅವರು ತಮ್ಮ ಕಂಕುಳಲ್ಲಿ ಫೈಲ್ ಇರಿಸಿಕೊಂಡು ವಿಧಾನಸೌಧದ ಕಚೇರಿಗಳಿಗೆ ಸ್ವತಃ ತಿರುಗಿ ಸಾಕಷ್ಟು ಅನುದಾನ ಕೊಡಿಸಿದ್ದಾರೆ. ದೇವಾಲಯಕ್ಕೆ ಸೇರಿದ ಮಳಿಗೆ, ದೇವಾಲಯದ ಅಭಿವೃದ್ಧಿ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಅವು ನೀಡಿದ ಸೇವೆಯನ್ನು ಮತ್ತು ಸಹಾಯವನ್ನು ನಾವು ಮರೆಯುವುದಿಲ್ಲ, ನಾನು ಸದಾಕಾಲ ಅವರ ಜತೆಗೆ ಇರುತ್ತೇವೆ ಎಂದರು.

ಇದೇ ವೇಳೆ ದೇವಾಲಯದ ವತಿಯಿಂದ ಶಾಸಕ ತನ್ವೀರ್ ಸೇಠ್ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ಶೌಕತ್ ಅಲಿ ಖಾನ್, ಅಜೀಜ್ ಸೇಠ್ ಪ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇಕ್ಬಾಲ್, ಮುಖಂಡರಾದ ಇಲ್ಯಾಸ್ ಅಹಮದ್ @ ಬಾಬು, ಕುರುಬರ ಶ್ರೀ ಬೀರೇಶ್ವರ ಶ್ರೀ ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಸ್.ಬಸವರಾಜು, ಉಪಾಧ್ಯಕ್ಷರಾದ ಸಿದ್ದಯ್ಯ, ಖಜಾಂಚಿ ಚುಂಚಯ್ಯ, ನಿರ್ದೇಶಕರಾದ ದಾಸಪ್ಪ, ಮಲ್ಲಯ್ಯ, ಗಾಯಿತ್ರಿ ಕರಿಯಪ್ಪ, ಆರ್.ಮಹದೇವು, ನಾಗೇಶ್, ಮಹದೇವು, ದಿನೇಶ್, ರಂಗಸ್ವಾಮಿ ಮತ್ತಿತರರು ಇದ್ದರು.