ಬೆಂಗಳೂರು:ವಿಧಾನಸಭೆಯ ಗಲಾಟೆ ವೇಳೆ ಅಸ್ವಸ್ಥಗೊಂಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಗ್ಯ ಸ್ಥಿರವಾಗಿದ್ದು, ವೈದ್ಯರು ಒಂದು ದಿನದ ಮಟ್ಟಿಗೆ ಆಸ್ಪತ್ರೆಯಲ್ಲಿಯೇ ಇದ್ದುಕೊಂಡು ಆರೈಕೆ ಪಡೆಯುವಂತೆ ಸೂಚಿಸಿದ್ದಾರೆ.
ಬುಧವಾರ ಸಂಜೆ ವಿಧಾನಸೌಧದಲ್ಲಿ ಬಿಜೆಪಿ ಅಮಾನತುಗೊಂಡ ಶಾಸಕರನ್ನು ಸದನದಿಂದ ಹೊರ ಹಾಕುವ ಸಂದರ್ಭದಲ್ಲಿ ನಡೆದ ಪ್ರತಿಭಟನೆಯಲ್ಲಿ ಯತ್ನಾಳ್ ಕೂಡಾ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಶಾಸಕರು, ಮಾರ್ಷಲ್‌ಗಳ ನಡುವೆ ನಡೆದ ತಳ್ಳಾಟ ನೂಕಾಟದಲ್ಲಿ ಯತ್ನಾಳ್ ಅವರು ದಿಢೀರ್ ಕುಸಿದು ಬಿದ್ದರು.
ಕೂಡಲೇ ಅವರನ್ನು ವಿಧಾನಸೌಧದ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಸಮೀಪದಲ್ಲಿರುವ ಕನ್ನಿಂಗ್‌ಹ್ಯಾಮ್ ರಸ್ತೆಯ ಪೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ತಪಾಸಣೆ ನಡೆಸಿದ್ದು, ರಕ್ತದೊತ್ತಡ ಹೆಚ್ಚಾಗಿದ್ದು, ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದರು. ಒಂದು ದಿನದ ಮಟ್ಟಿಗೆ ನಿಗಾವಹಿಸಲು ಆಸ್ಪತ್ರೆಯಲ್ಲಿಯೇ ಆರೈಕೆಯಲ್ಲಿವಂತೆ ಸೂಚಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಯತ್ನಾಳ್ ಅವರ ಆರೋಗ್ಯ ವಿಚಾರಿಸಿದರು. ಬಳಿಕ ಬಿಜೆಪಿ ಶಾಸಕ ಡಾ.ಸಿಎನ್ ಅಶ್ವತ್ಥ ನಾರಾಯಣ ಸೇರಿದಂತೆ ಹಲವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಸಿಎಂ ಹಾಗೂ ಸ್ಪೀಕರ್ ಆಸ್ಪತ್ರೆ ಭೇಟಿ
ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಸ್ಪೀಕರ್ ಯುಟಿ ಖಾದರ್ ಸಹ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಯತ್ನಾಳ್ ಅವರು ಗಲಾಟೆ ನಡೆದ ಸಂದರ್ಭವನ್ನು ಸಿಎಂಗೆ ವಿವರಿಸಿದರು.