29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರಿಂದ ವಿರುದ್ಧ ಫೆಬ್ರವರಿ 12 ನೇ ತಾರೀಖಿನಂದು ದೇಶ ವ್ಯಾಪಿ ನಡೆಯುವ ಅಖಿಲ ಭಾರತ ಮುಷ್ಕರದ ಪ್ರಚಾರಾರ್ಥವಾಗಿ ಸಿಐಟಿಯು ಉಳ್ಳಾಲ ತಾಲೂಕು ಸಮಿತಿ ವತಿಯಿಂದ ತಲಪಾಡಿಯಿಂದ ಪಂಪ್ವೆಲ್ ವರೆಗೆ ಬೃಹತ್ ಕಾಲ್ನಡಿಗೆ ಜಾಥ ನಡೆಯಿತು. ಈ ಜಾಥವನ್ನು ತಲಪಾಡಿ ಯಲ್ಲಿ ಉದ್ಘಾಟನೆ ಮಾಡಿ ಮಾತನಾಡಿದ ಸಿಐಟಿಯು ಜಿಲ್ಲಾ ಮುಖಂಡರಾದ ಜೆ ಬಾಲಕೃಷ್ಣ ಶೆಟ್ಟಿ ಮಾತನಾಡಿ ಕೇಂದ್ರದ ಮೋದಿ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಮಾಲಕರ ಕಾನೂನುಗಳನ್ನಾಗಿ ಪರಿವರ್ತನೆ ಮಾಡುತ್ತಿದೆ. ಪ್ರಮುಖ 29 ಕಾರ್ಮಿಕ ಕಾನೂನುಗಳನ್ನು ತೆಗೆದುಹಾಕಿ ನಾಲ್ಕು ಸಂಹಿತೆಗಳನ್ನಾಗಿ ಮಾರ್ಪಾಡು ಮಾಡಿದೆ. ಸ್ವಾತಂತ್ರ್ಯ ನಂತರ ದೀರ್ಘ ಹೋರಾಟದ ಫಲವಾಗಿ ಕನಿಷ್ಠ ವೇತನ ಕೆಲಸದ ಸಮಯದ ಮಿತಿ ಸಂಘಟನೆ ಮತ್ತು ಮುಷ್ಕರದ ಹಕ್ಕು ಸಾಮಾಜಿಕ ಭದ್ರತೆ ಕಾನೂನುಗಳು ಬಂದವು. ಆದರೆ ಈ ಎಲ್ಲಾ ಹಕ್ಕುಗಳನ್ನು ಹಿಂಪಡೆಯುವ ಪ್ರಯತ್ನವೇ ಈ ನಾಲ್ಕು ಕಾರ್ಮಿಕ ಸಂಹಿತೆಗಳು. ಕೇಂದ್ರದಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ 2014 ರಿಂದ ದೇಶದ ಉನ್ನತ ತ್ರಿಪಕ್ಷಿಯ ವೇದಿಕೆ ಆದ ಭಾರತೀಯ ಕಾರ್ಮಿಕ ಸಮ್ಮೇಳನವನ್ನು ಕರೆಯಲಾಗಿಲ್ಲ. ಎಲ್ಲಾ ಕೇಂದ್ರ ಕಾರ್ಮಿಕ ಸಂಘಗಳು ಒಕ್ಕೊರಳಿನಿಂದ ಈ ಸಂಹಿತೆಗಳನ್ನು ವಿರೋಧಿಸಿದೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಇಲ್ಲದ ವೇಳೆ ಪ್ರಮುಖ ಆಕ್ಷೇಪಣೆಗಳನ್ನು ನಿರ್ಲಕ್ಷಿಸಿ ಚರ್ಚೆ ಇಲ್ಲದೆ ಈ ಸಂಹಿತೆಗಳಿಗೆ ಅಂಗೀಕಾರ ಪಡೆದಿದೆ. ಹೊಸ ಸಂಹಿತೆಯಲ್ಲಿ ಸಂಘಟನೆ ಮತ್ತು ಮುಷ್ಕರಕ್ಕೆ ಅವಕಾಶವಿಲ್ಲ. 1926 ಟ್ರೇಡ್ ಯೂನಿಯನ್ ಆಕ್ಟಿನಲ್ಲಿ ಒಂದು ಕೈಗಾರಿಕೆಯ 7 ಕಾರ್ಮಿಕರು ಒಟ್ಟಾಗಿ ಸಂಘ ರಚಿಸಲು ಅವಕಾಶವಿತ್ತು. ಹಿಂದಿನ ಕಾನೂನಿನ ಪ್ರಕಾರ ಮುಷ್ಕರ ನಡೆಸಲು 15 ದಿನಗಳ ಮುಂಚಿತವಾಗಿ ನೋಟಿಸ್ ನೀಡಿದರೆ ಸಾಕಿತ್ತು ಆದರೆ ಹೊಸ ಸಂಹಿತೆ ಪ್ರಕಾರ ಅದನ್ನು 60 ದಿವಸಗಳಿಗೆ ಏರಿಕೆ ಮಾಡಲಾಗಿದೆ ಮಾತ್ರವಲ್ಲ ಸಂಧಾನ ನಡೆಯುವವರಿಗೆ ಮುಷ್ಕರ ಅಕ್ರಮ ಅಲ್ಲದೆ ಇನ್ನೊಬ್ಬರ ಹೋರಾಟಕ್ಕೆ ಬೆಂಬಲ ಸೂಚಿಸಿ ಮುಷ್ಕರ ಮಾಡಿದರೆ ಅದು ಅಪರಾಧ. ಇಂತಹ ಕರಾಳ ಸಂಹಿತೆಗಳನ್ನು ಮೋದಿ ಸರ್ಕಾರ ಜಾರಿ ಮಾಡಿದೆ. ಇದರ ವಿರುದ್ಧ ಎಲ್ಲಾ ಕಾರ್ಮಿಕ ವರ್ಗದವರು ಕೇಂದ್ರ ಸರ್ಕಾರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಾಗಿದೆ ಎಂದು ಕರೆ ನೀಡಿದರು. ಕಾರ್ಮಿಕ ಮುಖಂಡರಾದ ಸುಕುಮಾರ್ ತೊಕ್ಕೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಜಾಥದಲ್ಲಿ ಕಾರ್ಮಿಕ ಮುಖಂಡರಾದ ಸುಂದರ ಕುಂಪಲ, ಜಯಂತ್ ನಾಯಕ್ ರೈತ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಪದ್ಮಾವತಿ ಶೆಟ್ಟಿ , ವಿಲಾಸಿನಿ ತೊಕ್ಕೊಟ್ಟು, ರಫೀಕ್ ಹರೇಕಳ ನಿತಿನ್ ಕುತ್ತಾರ್ ಶೇಖರ್ ಕುಂದರ್, ಮಹಾಬಲ ದೆಪ್ಪೆಲಿ ಮಾರ್, ಇಬ್ರಾಹಿಂ ಮದಕ, ರಮೇಶ್ ಉಳ್ಳಾಲ, ಸುನಿಲ್ ತೇವುಲ,ಪ್ರಮೋದಿನಿ ಕಲ್ಲಾಪು, ಜಯರಾಮ್ ತೇವುಲ, ಜನಾರ್ಧನ ಕುತ್ತಾರ್, ರಝಕ್ ಮುಡಿಪು,ಅಶ್ರಫ್ ಹರೇಕಳ, ರಿಜ್ವಾನ್ ಹರೇಕಳ ಉಪಸ್ಥಿತರಿದ್ದರು. ಜಾಥ ನಾಯಕ ರೋಹಿದಾಸ್ ಭಟ್ನಗರ ವಂದಿಸಿದರು.
ವರದಿ: ಮಂಗಳೂರಿನಿಂದ ಶಂಶೀರ್ ಬುಡೋಳಿ



