ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ) ಅಧಿಕಾರಿಗಳು ಮತ್ತು ಸಿಬ್ಬಂದಿಯರ ಕುಂದುಕೊರತೆಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ಪ್ರತಿ ತಿಂಗಳು ಕಡ್ಡಾಯವಾಗಿ ಸಭೆ ನಡೆಸುವಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಆದೇಶ ಹೊರಡಿಸಿದ್ದಾರೆ.
ಆದೇಶದ ಪ್ರಕಾರ ಪ್ರತಿ ತಿಂಗಳ ಎರಡನೇ ಭಾನುವಾರ ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸ್ ಕಚೇರಿಗಳು, ಪೊಲೀಸ್ ಕಮಿಷನರೇಟ್‌ಗಳು ಹಾಗೂ ವಿಶೇಷ ಘಟಕಗಳಲ್ಲಿ ಕುಂದುಕೊರತೆ ನಿವಾರಣಾ ಸಭೆಗಳನ್ನು ಕಡ್ಡಾಯವಾಗಿ ಆಯೋಜಿಸಬೇಕು. ಈ ಸಭೆಗಳಲ್ಲಿ ಸಿಬ್ಬಂದಿಯ ಸೇವಾ ಸಂಬಂಧಿತ ಸಮಸ್ಯೆಗಳು ಮತ್ತು ದೂರುಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹರಿಸಬಹುದಾದ ಪ್ರಕರಣಗಳನ್ನು ತಕ್ಷಣವೇ ಇತ್ಯರ್ಥಪಡಿಸುವಂತೆ ಪೊಲೀಸ್ ಮಹಾನಿರ್ದೇಶಕರು (ಡಿಜಿ ಮತ್ತು ಐಜಿಪಿ) ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದಕ್ಕೂ ಮೊದಲು ಇಂತಹ ಸಭೆಗಳು ನಿಯಮಿತವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಸಭೆಯಲ್ಲಿ ಸ್ವೀಕರಿಸಲಾದ ದೂರುಗಳು, ಅವುಗಳ ಕುರಿತು ಕೈಗೊಂಡ ಕ್ರಮಗಳು ಹಾಗೂ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಅಗತ್ಯವಿರುವ ವಿಷಯಗಳ ವಿವರಗಳನ್ನು ಕಡ್ಡಾಯವಾಗಿ ದಾಖಲಿಸಿ, ಸಂಬಂಧಿತ ಉನ್ನತಾಧಿಕಾರಿಗಳಿಗೆ ರವಾನಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.



