Friday, June 19, 2026
Google search engine

Homeರಾಜ್ಯನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಮಾಸಿಕ ಸಭೆ ಕಡ್ಡಾಯ : ಡಾ. ಯತೀಂದ್ರ ಸಿದ್ದರಾಮಯ್ಯ

ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಮಾಸಿಕ ಸಭೆ ಕಡ್ಡಾಯ : ಡಾ. ಯತೀಂದ್ರ ಸಿದ್ದರಾಮಯ್ಯ

ಬೆಂಗಳೂರು : ನಗರಾಭಿವೃದ್ಧಿ ಪ್ರಾಧಿಕಾರಗಳು ಕಾಲ ಕಾಲಕ್ಕೆ ಪ್ರಾಧಿಕಾರದ ಸಭೆ ನಡೆಸದಿರುವ ಹಿನ್ನೆಲೆಯಲ್ಲಿ ನಾಗರಿಕರಿಗೆ ಸರಿಯಾಗಿ ಸೌಲಭ್ಯ ಕೊಡಲು ಸಾಧ್ಯವಾಗುತ್ತಿಲ್ಲ. ಪ್ರತಿ ತಿಂಗಳು ಪ್ರಾಧಿಕಾರದ ಸಭೆ ನಡೆಸಬೇಕು ಎಂದು ನಗರಾಭಿವೃದ್ಧಿ ಸಚಿವ  ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ 34 ಅಭಿವೃದ್ಧಿ ಪ್ರಾಧಿಕಾರಗಳ ಪ್ರಗತಿ ಪರಿಶೀಲನೆ ನಡೆಸಿದ  ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ಕೆಲವು ಪ್ರಾಧಿಕಾರಗಳು ವರ್ಷಕ್ಕೆ 2 ಅಥವಾ 3 ಸಭೆಗಳನ್ನು ಮಾತ್ರ ಮಾಡಿವೆ.  ಇದರಿಂದ ಪ್ರಗತಿ ಸಾಧ್ಯವಿಲ್ಲ. ಸಭೆ ನಡೆಸದಿರುವುದನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ವರ್ಷಕ್ಕೆ ಕನಿಷ್ಠ  8 ಸಭೆಗಳನ್ನಾದರೂ ಮಾಡಬೇಕು ಎಂದು ಸೂಚಿಸಿದರು.

ಜನಸಂಖ್ಯೆ ಬೆಳೆಯುತ್ತಿದೆ. ಅದಕ್ಕೆ ಅನುಗುಣವಾಗಿ ಸೌಲಭ್ಯಗಳನ್ನು  ಪ್ರಾಧಿಕಾರಗಳು ಕೊಡಬೇಕು. ಲಭ್ಯವಿರುವ ಜಾಗಗಳನ್ನು ತೆಗೆದುಕೊಂಡು ಅಭಿವೃದ್ಧಿ ಪಡಿಸಬೇಕು. ವಸತಿ ಇಲಾಖೆಯಿಂದ ಬೇಡಿಕೆಗೆ ತಕ್ಕಷ್ಟು ಮನೆಗಳನ್ನು ನೀಡಲಾಗುತ್ತಿಲ್ಲ. ವಸತಿಗಳಿಗೆ ಬೇಡಿಕೆ ಇದೆ. ನಮ್ಮ ಪ್ರಾಧಿಕಾರಗಳಿಂದ ಖಾಸಗಿ ಅಪಾರ್ಟ್‌ಮೆಂಟ್‌ ಗಳ ರೀತಿಯಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿ ಮನೆಗಳನ್ನು ಹಂಚುವ ಬಗ್ಗೆ ಪರಿಶೀಲಿಸಲು ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಮಾಸ್ಟರ್ ಪ್ಲಾನ್‌ ಗಳ ಬಗ್ಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ಪರಿಶೀಲಿಸಿದರು. ಹಳೆಯ ಮಾಸ್ಟರ್ ಪ್ಲಾನ್ ಅನ್ನು ಪರಿಸ್ಕರಿಸಿ,  ಎಲ್ಲಾ ಪ್ರಾಧಿಕಾರಗಳು ಜಿಐಎಸ್ ಆಧರಿಸಿ ಮಾಸ್ಟರ್ ಪ್ಲಾನ್ ತಯಾರಿಸಬೇಕು ಎಂದರು. ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಮಾಸ್ಟರ್ ಪ್ಲಾನ್ ಮಾಡಲಾಗಿದೆ. 2024ರಿಂದ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಬಂದಿದೆ. ಈ ಪ್ರಾಧಿಕಾರದ ವ್ಯಾಪ್ತಿಯನ್ನು ಬಿಟ್ಟು ಮಾಸ್ಟರ್ ಪ್ಲಾನ್ ಮಾಡಬೇಕಿದೆ ಎಂದರು.

ಎಲ್ಲಾ ಪ್ರಾಧಿಕಾರಗಳು ಪಾರದರ್ಶಕವಾಗಿ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಬೇಕು. ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಪ್ರಾಧಿಕಾರಗಳು ಕೆರೆಗಳ ಬ್ಯೂಟಿಫಿಕೇಷನ್ ಬಗ್ಗೆ ಒತ್ತು ನೀಡುತ್ತಿವೆ. ನೀರು ಸಂಗ್ರಹದ ಬಗ್ಗೆ ಗಮನ ಹರಿಸುತ್ತಿಲ್ಲ. ನೀರಿಲ್ಲದಿದ್ದರೆ ಕೆರೆಗಳು ಉಪಯೋಗವಿಲ್ಲ‌. ಕೊಳಚೆ ನೀರು ಹರಿಯದಂತೆ ಕ್ರಮವಹಿಸಬೇಕು. ಡಿ-ಸಿಲ್ಟಿಂಗ್, ಕುಡಿಯುವ ನೀರಿಗೆ ಕೆರೆ ಅಭಿವೃದ್ಧಿಪಡಿಸಲಾಗುತ್ತಿದೆ. ಕೆರೆಗಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಕಟ್ಟಡ ನಿರ್ಮಾಣ ಪರವಾನಿಗೆ ವಿಳಂಬವಾಗಬಾರದು. ವಿಳಂಬದಿಂದ ಜನರಿಗೆ ನಿರ್ಮಾಣ ವೆಚ್ಚ ಹೆಚ್ಚಾಗುತ್ತದೆ. ವಿನಾಕಾರಣ ವಿಳಂಬ ಮಾಡಿದರೆ ಕ್ರಮಗೊಳ್ಳಲಾಗುವುದು ಎಂದರು.

ನಿವೇಶನ ಹಂಚಿಕೆ ಆಗಿರುವವರಿಗೆ ಟೈಟಲ್ ಡೀಡ್ ಕೊಡಲು ಸಮಸ್ಯೆಯಾಗಿದೆ. ಅದನ್ನು ವಾಪಸ್ ತೆಗೆದುಕೊಳ್ಳುವುದು ಸರಿಯಲ್ಲ. ದಂಡ ವಿಧಿಸಿ, ಟೈಟಲ್ ಡೀಡ್ ನೀಡುವ ಬಗ್ಗೆ ಕ್ರಮವಹಿಸಲು ತಿಳಿಸಿದರು.

ಮುಖ್ಯಮಂತ್ರಿಗಳು ಇತ್ತೀಚೆಗೆ ನಡೆದ ಡಿಸಿ, ಸಿಇಒ ಗಳ ಸಭೆಯಲ್ಲಿ ನಗರಗಳ ಅಸಮರ್ಪಕ ಬೆಳವಣಿಗೆ ಬಗ್ಗೆ  ಎಚ್ಚರ ವಹಿಸುವಂತೆ ಸೂಚಿಸಿದ್ದರು. ಯೋಜಿತ ನಗರ ಬೆಳವಣಿಗೆಗೆ ಗಮನ ಹರಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ ಕಾವೇರಿ, ನಗರ ಯೋಜನೆ ಇಲಾಖೆ ಆಯುಕ್ತರಾದ ಶಿವಾನಂದ ಕಾಪಸಿ, ನಗರ ಯೋಜನೆ ಇಲಾಖೆ ನಿರ್ದೇಶಕರಾದ ತಿಪ್ಪೇಸ್ವಾಮಿ, ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular