ಕರ್ನಾಟಕ ರಾಜ್ಯಾದ್ಯಂತ 12 ಲಕ್ಷಕ್ಕಿಂತಲೂ ಮೇಲ್ಪಟ್ಟು ವೃದ್ಧ ಮಹಿಳೆಯರ ಆಧಾರ್ ಕಾರ್ಡ್ ಅಳಿಸಿ ಹೋಗಿದ್ದು ಈ ಕುರಿತು ಅಧಿಕಾರಿಗಳಲ್ಲಿ ಕಾರಣ ಕೇಳಿದಾಗ ಸರಿಯಾದ ಉತ್ತರವೂ ದೊರಕದೆ ಇರುವುದು ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಕರ್ನಾಟಕ ಆಮ್ ಆದ್ಮಿ ಪಕ್ಷದ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷರಾದ ಬಿ ನವೀನ್ ಚಂದ್ರ ಪೂಜಾರಿ ಆರೋಪಿಸಿದ್ದಾರೆ. ಅವರು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಈ ಸಮಸ್ಯೆ ಬಗ್ಗೆ ಈ ಹಿಂದೆ ಅಧಿಕಾರಿಗಳ ಗಮನವನ್ನು ಸೆಳೆಯಲಾಗಿತ್ತು. ಅರ್ಜಿಯನ್ನು ಡಿಸಿ ಆಫೀಸ್‌ನಲ್ಲಿ ಕೊಟ್ಟು ಆದಮೇಲೆ 45 ದಿನಗಳ ನಂತರ ಪರಿಶೀಲಿಸಲಾಗುವುದು ಎನ್ನುವ ಉತ್ತರವನ್ನು ನೀಡುತ್ತಾರೆ. ಇದು ಕಾನೂನುಬಾಹಿರವಾಗಿದ್ದು ಒಬ್ಬ ವ್ಯಕ್ತಿ ಜೀವಂತವಿರುವಾಗಲೇ ಅವರು ಮೃತಪಟ್ಟಿದ್ದಾರೆಂದು ಆಧಾರ್ ಕಾರ್ಡನ್ನು ಅಳಿಸಿ ಹಾಕಿರುವುದು ಇದು ಬಡವರ್ಗದ ಜನರಿಗೆ ಮಾಡಿರುವ ಅನ್ಯಾಯವಾಗಿದೆ ಎಂದರು.
ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಪರ ಎಂದು ಹೇಳಿಕೊಂಡು ಬಡವರಿಗೆ ಸರಕಾರದಿಂದ ಸಿಗುವ ಸವಲತ್ತುಗಳಿಗೆ ಕೊಳ್ಳಿ ಇಟ್ಟಿರುತ್ತಾರೆ. ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿದ್ದು ಕೂಡಲೇ ತಪ್ಪನ್ನು ಸರಿ ಮಾಡಿ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ಸಾರ್ವಜನಿಕರಲ್ಲಿ ನನ್ನ ವಿನಂತಿ ಏನಂದರೆ ಕೂಡಲೇ ತಮ್ಮ ಆಧಾರ್ ಕಾರ್ಡುಗಳನ್ನು ಅಳಿಸಿ ಹೋಗಿದ್ದೆಯೋ ಇಲ್ಲವೋ ಎಂದು ಪರಿಶೀಲಿಸಬೇಕು ಎಂದರು.
ಈ ತಪ್ಪನ್ನು ಕೂಡಲೆ ಸರಿ ಮಾಡದಿದ್ದಲ್ಲಿ ರಾಜ್ಯಾದಾದ್ಯಂತ ಆಮ್ ಆದ್ಮ ಪಕ್ಷದ ಹಿಂದುಳಿದ ವರ್ಗದ ಘಟಕವು ಪ್ರತಿಭಟನೆ ಮಾಡವುದಾಗಿ ಎಚ್ಚರಿಸಿದರು.
ರಾಜ್ಯ ವಿವಿಧ ಕಡೆ ಜೀವಂತವಾಗಿರುವವರ ಸುಮಾರು 12 ಲಕ್ಷಕ್ಕೂ ಅಧಿಕ ಆಧಾರ್ ಕಾರ್ಡ್‌ಗಳು ಅಳಿಸಿ ಹೋಗಿರುವ ಮಾಹಿತಿ ಇದೆ. ದ.ಕ. ಜಿಲ್ಲೆಯಲ್ಲೂ ಸುಮಾರು 30000 ಮಂದಿಯ ಆಧಾರ್ ಕಾರ್ಡ್ ಡಿಲೀಟ್ ಆಗಿರುವುವುದಾಗಿ ಅಂದಾಜಿಸಲಾಗಿದೆ. ಜೀವಂತ ಇರುವಾಗಲೇ ಮೃತಟ್ಟಿದ್ದಾರೆಂದು ಆಧಾರ್ ಕಾರ್ಡ್ ಡಿಲೀಟ್ ಮಾಡಿರುವುದು ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ರವಿ ಪ್ರಸಾದ್, ಕುಶಲ್ ಕುಮಾರ್, ಪಾಂಡುರಂಗ, ಕೆ.ಎ., ದ್ಯಾವಪ್ಪ ಗಿರಿಯಪ್ಪಣ್ಣವರ್, ಸಂದೀಪ್ ಶೆಟ್ಟಿ ಅಡ್ಕ ಉಪಸ್ಥಿತರಿದ್ದರು.



