ರಾಮನಗರ : ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಶಶಿ ಅವರ ನೇತೃತ್ವದಲ್ಲಿ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಶುಕ್ರವಾರ ನಗರ ವಾರ್ಡ್ ನಂ.೧೭ ಬಾಲಗೇರಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ಪರಿಶೀಲಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
೧೭ನೇ ವಾರ್ಡ್ ಬಾಲಗೇರಿಗೆ ಭೇಟಿ ನೀಡಿದ ಅವರು, ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ವಾರ್ಡ್‌ನ ಎಲ್ಲ ರಸ್ತೆಗಳನ್ನು ಸುತ್ತಾಡಿ, ಮನೆ ಬಳಿಯೇ ತೆರಳಿ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ವಾರ್ಡಿನಲ್ಲಿ ನೀರಿನ ಸಮಸ್ಯೆ ತಲೆ ದೋರಿದೆ. ಸಮರ್ಪಕವಾಗಿ ನೀರು ಬರುತ್ತಿಲ್ಲ. ಕೆಲವೊಮ್ಮೆ ನಾಲ್ಕೈದು ದಿನವಾದರೂ ನೀರು ಬರುವುದಿಲ್ಲ ಎಂದು ಸಾರ್ವಜನಿಕರು ದೂರಿದರು.
ಸ್ಥಳದಲ್ಲೇ ಇದ್ದ ಜಲ ಮಂಡಳಿ ಅಧಿಕಾರಿಗಳನ್ನು ಕರೆದು ಸಮಸ್ಯೆ ಕಾರಣವೇನೆಂದು ಕೇಳಿದರು. ಪೈಪ್ ಲೈನ್ ಬ್ಲಾಕ್ ಆಗಿರುವ ಕಾರಣ ನೀರು ಸರಿಯಾಗಿ ಸರಬರಾಜಾಗುತ್ತಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಮುಂದಿನ ಹತ್ತು ದಿನದಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ ನಗರಸಭೆಯಲ್ಲಿ ನಗರಸಭೆ ಬಜೆಟ್ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಕೆಲವು ಸಾರ್ವಜನಿಕರು ವಾರ್ಡ್ ಸಂಖ್ಯೆ ೧೭ ಈ ವಾರ್ಡಿಗೆ ಸಂಬಂಧಿಸಿದಂತೆ ನಾಗರಿಕರು ಅನುಭವಿಸುತ್ತಿರುವ ಸಮಸ್ಯೆ ಪರಿಹರಿಸುವಂತೆ ನನ್ನ ಗಮನ ಸೆಳೆದಿದ್ದರ ಹಿನ್ನೆಲೆಯಲ್ಲಿ ಇಂದು ಬಾಲಗೇರಿಗೆ ಭೇಟಿ ನೀಡಿದ್ದೇನೆ ಎಂದರು.
ಮುಂದುವರೆದು, ಬಿಸಿಲುಮಾರಮ್ಮ ದೇವಸ್ಥಾನ, ಬಂಡಾರಮ್ಮ ದೇವಸ್ಥಾನ, ಆಶ್ರಯ ಬಡಾವಣೆಗೆ ಭೇಟಿ ನೀಡಿದಾಗ, ಈ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದಿದ್ದು, ಈ ಭಾಗದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಕಂಡು ಹಿಡಿದು ಸಮಸ್ಯೆಯನ್ನು ಮಾರ್ಚ್ ೧೦ರೊಳಗೆ ಆದಷ್ಟು ಬೇಗ ಪರಿಹರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಇನ್ನೂ ಈ ಭಾಗದಲ್ಲಿ ಫಿಲೇಚರ್ ಗಳಿಂದ ಹೊರ ಬರುವ ಬೂದಿ, ಸೌದೆಯ ತುಂಡುಗಳನ್ನು ಚರಂಡಿಗೆ ಹಾಕುತ್ತಾರೆ. ಇದರಿಂದ ನೀರು ಸರಾಗವಾಗಿ ಹರಿಯುವುದಿಲ್ಲ. ಯುಜಿಡಿಯ ಸಮಸ್ಯೆಯಿಂದಾಗಿ ನೀರು ಸರಾಗವಾಗಿ ಹರಿಯಲು ತೊಂದರೆಯಾಗಿದೆ. ರೈಲ್ವೆ ಟ್ರಾಕ್ ಪಕ್ಕದಲ್ಲಿ ನಿವೇಶನದಾರರ ಸಮಸ್ಯೆ ಆಲಿಸಿದ್ದೇನೆ. ನಾಳೆಯಿಂದಲೇ ಈ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸಮುದಾಯ ಭವನದ ನಿರ್ಮಾಣ ಹಾಗೂ ಮನೆಗಳ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ರಾಮನಗರ ನಗರಸಭೆ ಸಾರ್ವಜನಿಕ ಕಲ್ಯಾಣಕ್ಕಾಗಿ ಇದ್ದು, ಸಾರ್ವಜನಿಕರ ನಗರಸಭೆ ಬಾಲಗೇರಿ ಜನರಿಗೆ ಯಾವುದೇ ಮೂಲಭೂತವಾದ ಸಮಸ್ಯೆಗಳಿಗೆ ತೊಂದರೆ ಇರದಂತೆ ಕೆಲಸ ಮಾಡುತ್ತದೆ ಎಂದು ತಿಳಿಸಿದರು.



